೨೦೧೬ರ ಜೂನ್ ತಿಂಗಳಿರಬೇಕು. ನಮ್ಮ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಒಂದು ದಿನ ನನ್ನ ಸಹೋದ್ಯೋಗಿಯೊಬ್ಬರು ನಮ್ಮ ವಿಭಾಗಕ್ಕೆ ಬಂದರು. ಅವರ ಮುಖ ತುಸು ಚಿಂತಾಗ್ರಸ್ತವಾದಂತೆ ಕಂಡಿತು. “ನನ್ನ ಮಗಂಗೆ ಏನಾದ್ರೂ ಮಾಡಿ ಕನ್ನಡ ಹೇಳಿಕೊಡ್ಬೇಕಲ್ಲಾ ಮೇಡಂ. ಅವನು ಈಗ ಒಂಬತ್ತನೇ ತರಗತೀಲಿದಾನೆ. ಕೇಂದ್ರೀಯ ವಿದ್ಯಾಲಯದಲ್ಲಿ ಓದ್ತಾನೆ. ಅಲ್ಲಿ ಕನ್ನಡ ಇಲ್ಲ,*** ಹಿಂದಿ ಓದೋದು ಅವ್ನು. ನಿನ್ನೆ ನಮ್ಮೂರು ಮೈಸೂರಿಗೆ ರೈಲಲ್ಲಿ ಹೋಗಿದ್ವಿ. ಯಾರ ಕೈಯಲ್ಲೋ ಇದ್ದ ಕನ್ನಡ ನ್ಯೂಸ್‌ಪೇಪರ್‌ನ ನನ್ನ ಮಗ ಕೈಗೆತ್ತಿಕೊಂಡೋನು ಉಲ್ಟಾ ಹಿಡಕೊಂಡು ಓದಕ್ಕೆ ಹೋಗ್ಬಿಟ್ಟ ಮೇಡಂ. ಅವ್ರು `ಪೇಪರ್ ಉಲ್ಟಾ ಹಿಡಕೊಂಡಿದ್ದೀಯಲ್ಲಪ್ಪಾ, ನಿಂಗೆ ಕನ್ನಡ ಓದಕ್ಕೆ ಬರಲ್ವಾ? ಅಂದ್ರು. ನಂಗೆ ತುಂಬ ಗಾಬರಿ ಆಯ್ತು. ಅಯ್ಯೋ, ನಾಳೆ ಈ ಮಗು ಗತಿ ಏನು ಅಂತ. ಕನ್ನಡ ನಾಡಿನಲ್ಲಿ ಕನ್ನಡವೇ ಬರದೆ ಇದ್ರೆ ಕಷ್ಟ ಅಲ್ವಾ ಮೇಡಂ? ಅಂದರು.

ಈ ತಂದೆಯ ಚಿಂತೆ, ತಳಮಳ ನನಗೆ ಅರ್ಥವಾಯಿತು. ಮುಂದುವರಿದು ಅವರಂದರು, “ನನ್ನ ಮಿಸ್ಸೆಸ್ಸು ಅವನು ಎರಡನೇ ಕ್ಲಾಸಿನಲ್ಲಿದ್ದಾಗ ಕನ್ನಡ ಕಲಿಸಕ್ಕೆ ಪ್ರಯತ್ನ ಮಾಡಿದ್ರು ಮೇಡಂ. ಸ್ವಲ್ಪ ಕಲ್ತಿದ್ದ. ಆಮೇಲೆ ಸ್ಕೂಲು ಪಾಠ ಜಾಸ್ತಿ ಇರುತ್ತೆ, ಟೈಮಿಲ್ಲ ಅದೂ ಇದೂ ಅಂತ ಮುಂದುವರಿಸದೆ ಹೋಗಿ ಕೊನೆಗೆ ಎಲ್ಲ ಮರೆತುಬಿಟ್ಟ. ಈಗ ಅವ್ನು ಮತ್ತೆ ಕನ್ನಡ ಕಲಿಯಕ್ಕಾಗುತ್ತಾ ಮೇಡಂ?.

ಮಾತಾಡುತ್ತಿದ್ದ ಅವರ ಮುಖದಲ್ಲಿ ವ್ಯಕ್ತವಾಗುತ್ತಿದ್ದ ಆತಂಕ ನೋಡಿ ನನಗೆ ಈ ಸಮಸ್ಯೆಯನ್ನು ಹೇಗಾದರೂ ಪರಿಹರಿಸಬೇಕಲ್ಲ ಅನ್ನಿಸಿತು. “ನಿಮ್ಮ ಮಗ ಕನ್ನಡ ಕಲಿಯಕ್ಕೆ ಕಾಲ ಮಿಂಚಿಲ್ಲ ಸರ್. ಈಗಲೂ ಅವ್ನು ಕನ್ನಡ ಕಲೀಬಹುದುಅಂದೆ.

ಸುಮಾರು ಹದಿನಾಲ್ಕು ವರ್ಷದ ಈ ಹುಡುಗನಿಗೆ ಅವನ ಶಾಲಾ ಪಾಠಗಳ ಜೊತೆಗೆ ಕನ್ನಡ ಕಲಿಸುವ ಉತ್ತಮ ವಿಧಾನವೇನು ಅಂತ ಯೋಚಿಸಿ, ಅವನ ತಂದೆ ತಾಯಿಯೊಂದಿಗೆ ಮಾತಾಡಿದೆ. ನಾವು ಮೂವರೂ ಸೇರಿ ಒಂದು ಯೋಜನೆಯನ್ನು ರೂಪಿಸಿದೆವು. ಅವನಿಗೆ ಕನ್ನಡ ಸಾಹಿತ್ಯ ಪರಿಷತ್‌ನ `ಕನ್ನಡ ಪ್ರವೇಶ ಪರೀಕ್ಷೆ ಕೊಡಿಸಿ, ಆ ನೆಪದಲ್ಲಿ ಅ ಆ ಇ ಈಯಿಂದ ಪಾಠ ಶುರು ಮಾಡಿ, ಕನ್ನಡವನ್ನು ಓದಕ್ಕೆ ಬರಿಯಕ್ಕೆ ಕಲಿಸಬೇಕು ಎಂಬ ಯೋಜನೆ ಹಾಕಿದೆವು. ಆ ಮಗುವಿಗೆ ಸಂತೋಷವಾಗಲಿ ಎಂದು ನಾನು `ನೋಡಪ್ಪಾ, ನೀನು ಕನ್ನಡ ಕಲಿತರೆ ನಿಂಗೆ ಇಷ್ಟವಾದ ತಿಂಡಿ ಕೊಡಿಸ್ತೀನಿ, ಏನು ಇಷ್ಟ ನಿಂಗೆ ಹೇಳು ಅಂದೆ. ತುಂಬ ಸಂಕೋಚದ ಮಗು ಅದು. ಮೊದಲು `ಏನೂ ಬೇಡ ಆಂಟಿ, ಏನು ಬೇಡ ಆಂಟಿ ಅನ್ನುತ್ತಿದ್ದವನು, ನಾನು ಬಲವಂತ ಮಾಡಿ ಕೇಳಿದ ನಂತರ `ನಂಗೆ …… ಹ್ಂ……… ಪಿಜ್ಝಾ ಇಷ್ಟ ಅಂದ. “ಆಯ್ತು. ಕನ್ನಡ ಕಲಿತ್ರೆ ನಿಂಗೆ ಪಿಜ್ಝಾ ಟ್ರೀಟ್! ಈ ಪರೀಕ್ಷೇಲಿ ಪಾಸಾದ ತಕ್ಷಣ ಕೊಡಿಸ್ತೀನಿ. ಸರೀನಾ?ಅಂದೆ. ಮುಗುಳ್ನಗುತ್ತಾ ಹುಡುಗ ಸರಿಯೆಂಬಂತೆ ತಲೆಯಲ್ಲಾಡಿಸಿದ.

ಶುರುವಾಯಿತು ನಮ್ಮ ಕನ್ನಡ ಪ್ರಯಾಣ. ಅದೇ ವರ್ಷದ ಜುಲೈನಿಂದ ಮುಂದಿನ ಜನವರಿ ತನಕ ನಾವು ಈ ಕುರಿತು ಕೆಲಸ ಮಾಡಿದೆವು. ಆ ಹುಡುಗ, ಅವನ ಅಪ್ಪ, ಅಮ್ಮ ಮತ್ತು ನಾನು – ನಾಲ್ಕು ಜನ. ಕಾಲೇಜಿಗೆ ನನ್ನ ಸಹೋದ್ಯೋಗಿ ಅಂದರೆ ಹುಡುಗನ ಅಪ್ಪ ತರುವ ಪುಸ್ತಕದಲ್ಲಿ ನಾನು ಕನ್ನಡ ಅಕ್ಷರ, ಪಾಠ ಬರೆದು ಕೊಡುವುದು, ಅವರ ಅಪ್ಪ ಮನೆಗೆ ಆ ಪುಸ್ತಕ ತೆಗೆದುಕೊಂಡು ಹೋಗುವುದು, ಅವರ ಅಮ್ಮ ಮನೆಯಲ್ಲಿ ಮಗನಿಂದ ಅದನ್ನು ತಿದ್ದಿಸುವುದು, ಮತ್ತೆ ಮಾರನೆಯ ದಿನ ನಾನು ಅಕ್ಷರ ಬರೆದುಕೊಡುವುದು …… ಹೀಗೆ ಮಾಡಲಾರಂಭಿಸಿದೆವು. ಪಾಪ, ಅವನು ತನ್ನ ಶಾಲೆಗಳ ದೈನಂದಿನ ಪಾಠದ ನಡುನಡುವೆ ಈ ಕನ್ನಡ ಪಾಠಗಳನ್ನೂ ಕಲಿತು, ಕಲಿತು ಬರೆದೇ ಬರೆದ. ಜನವರಿಯಲ್ಲಿ ಅದರ ಪರೀಕ್ಷೆ ನಡೆದು ಅವನು ಉತ್ತೀರ್ಣನಾದಾಗ ನಮಗೆಲ್ಲರಿಗೂ ತುಂಬ ಸಂತೋಷ ಆಯಿತು. ಫಲಿತಾಂಶ ಬಂದ ಒಂದು ವಾರದೊಳಗೆ ಒಂದು ದಿನ ನಾನು ಪಿಜ್ಝಾ ತರಿಸಿಕೊಟ್ಟಾಗ, ಶ್ರದ್ಧಾಭಕ್ತಿಯಿಂದ ಕನ್ನಡ ಕಲಿತ ಆ ಮಗುವಿನ ಮುಖದಲ್ಲಿ ಮೂಡಿದ ನಗು ಬೆಳಗಿನ ಸೂರ್ಯನ ಬೆಳಕಿನಂತಿತ್ತು.