ನನ್ನಂತಹ ಎಲ್ಲ ಅಧ್ಯಾಪಕರೂ ಅನುಭವಿಸುವ ಒಂದು ಕಿರಿಕಿರಿ ಸಂಗತಿ ಅಂದರೆ, ಬೆಳಿಗ್ಗೆ ಕಾಲೇಜಿನ ಮೊದಲ ತರಗತಿಗೆ ತಡವಾಗಿ ಬರುವ ವಿದ್ಯಾರ್ಥಿಗಳದ್ದು. ತರಗತಿ ಶುರುವಾಗಿ ಅರ್ಧ ಗಂಟೆಯಾದರೂ ಮಳೆಹನಿ ತೊಟ್ಟಿಕ್ಕಿದಂತೆ ಒಬ್ಬೊಬ್ಬರೇ ವಿದ್ಯಾರ್ಥಿಗಳು ಬರುತ್ತಲೇ ಇರುತ್ತಾರೆ. ಅವರು ಬಾಗಿಲು ತಟ್ಟುವುದು, ಒಳಗೆ ಬರಲು ಅಧ್ಯಾಪಕರ ಅನುಮತಿ ಕೋರುವುದು, ಧಡಧಡ ಎನ್ನುತ್ತಾ ಗಡಿಬಿಡಿ ಮಾಡಿಕೊಂಡು ಒಳಗೆ ಧಾವಿಸುವುದು, ಆ ಸಮಯದಲ್ಲಿ, ಮೊದಲು ಒಳಗೆ ಕುಳಿತಿದ್ದ ವಿದ್ಯಾರ್ಥಿಗಳು ಪಾಠ ಕೇಳುವುದನ್ನು ಅಲ್ಲಿಗೇ ಬಿಟ್ಟು ತಡವಾಗಿ ಬಂದವರನ್ನೇ ಹೊಸ ದೃಶ್ಯವೇನೋ  ಎಂಬಂತೆ ನೋಡುತ್ತಾ ಕೂರುವುದು, ರಾಮಾರಾಮಾ … ಒಟ್ಟಿನಲ್ಲಿ ಪಾಠಕ್ಕಂತೂ ತೊಂದರೆ. ಇನ್ನು `ತಡವಾಗಿ ಬಂದವರನ್ನು ಒಳಗೆ ಬಿಡುವುದಿಲ್ಲ’ ಎಂಬ ನಿಯಮ ಮಾಡಿದರೆ, ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿ ದೂರದೂರದಿಂದ ಬರುವ ಮತ್ತು ಸ್ವಂತ ವಾಹನಗಳನ್ನು ಇಟ್ಟುಕೊಳ್ಳುವ ಆರ್ಥಿಕ ಶಕ್ತಿ ಇಲ್ಲದಿರುವ ಬಡ ವಿದ್ಯಾರ್ಥಿಗಳ ಮೇಲೆ ಇದು ತುಂಬ ಕಠಿಣ ಕ್ರಮವಾಗುತ್ತದೇನೋ ಎನ್ನುವ ಭಾವ ಕಾಡುತ್ತದೆ. ನಾನು ಕೆಲಸ ಮಾಡುವುದು ಸರ್ಕಾರಿ ಕಾಲೇಜುಗಳಾದ್ದರಿಂದ ಈ ಪರಿಸ್ಥಿತಿ ಅನ್ನಿ. ಖಾಸಗಿ ಕಾಲೇಜುಗಳಲ್ಲಿ ಓದುವ ಶ್ರೀಮಂತ ವಿದ್ಯಾರ್ಥಿಗಳ ಮಾತು ಬೇರೆ.

ಸರಿ, ಮುಂದಿನ ಉಪಾಯವಾಗಿ `ತಡವಾಗಿ ಬಂದವರಿಗೆ ಹಾಜರಾತಿ ಕೊಡುವುದಿಲ್ಲ’ ಎಂಬ ಅಸ್ತ್ರದ ಪ್ರಯೋಗ ಮಾಡಿದೆ. ಹೀಗೆಂದ ತಕ್ಷಣ ತಮ್ಮ ಮನೆಯು ಕಾಲೇಜಿನಿಂದ ಅಯ್ಯೋ ಎಷ್ಟು ದೂರದಲ್ಲಿದೆ, ಬರುವಾಗ ಬಸ್ಸಿಗೆ ಹೇಗೆ ಅಪಘಾತವಾಯಿತು, ತಾವು ಬೆಳಿಗ್ಗೆ ತುಂಬ ಬೇಗ ಮನೆ ಬಿಟ್ಟರೂ ಬಸ್ಸು ಬರಲಿಲ್ಲ, ಏನು ಮಾಡೋದು, ಹಾಸ್ಟೆಲ್‌ನಲ್ಲಿ ಬೆಳಿಗ್ಗೆ ತಿಂಡಿ ಆಗಿರಲಿಲ್ಲ, ಮನೆಯಿಂದ ಬೇಗ ಬಂದಿದ್ದೆ ಮ್ಯಾಮ್ – ಡಬ್ಬಿಯ ತಿಂಡಿ ತಿಂದ್ಕೊಂಡು ಬರೋದು ತಡ ಆಯ್ತು …… ಓಹ್ ಒಂದೇ ಎರಡೇ …… ಅದೆಷ್ಟು ನೆಪಗಳು, ಕಾರಣಗಳು, ವಿವರಣೆಗಳು!!! ಇದು ಸಾಲದೆಂಬಂತೆ ಅತ್ತೂ ಕರೆದೂ ಕಣ್ಣಿನಲ್ಲಿ ಗಂಗಾ ಭವಾನಿ ಹರಿಸುವ ದೃಶ್ಯಗಳನ್ನು ನೋಡುವ ಸಂಕಟ ಬೇರೆ. ಅಂತೂ ಈ ಉಪಾಯವೂ ಫಲಿಸಲಿಲ್ಲ.

ಯೋಚಿಸಿ ಯೋಚಿಸಿ ತಲೆ ಕೆಡಿಸಿಕೊಂಡು, ಕೊನೆಗೆ ಬೇರೆಯೇ ಒಂದು ಅಸ್ತ್ರದ ಪ್ರಯೋಗ ಮಾಡಿದೆ. ದಿನದ ಮೊಟ್ಟಮೊದಲ ತರಗತಿಯು ಕನ್ನಡವಾಗಿದ್ದಾಗ `ಮೊದಲ ಹತ್ತು ನಿಮಿಷಗಳ ಒಳಗೆ ಬರುವ ಅವಕಾಶ ಇದೆ. ಆದರೆ ನಂತರ ತಡವಾಗಿ ಬರುವವರು ಎಷ್ಟು ನಿಮಿಷ ತಡವಾಗಿ ಬರುತ್ತಾರೋ ಅಷ್ಟು ಗಾದೆಮಾತು ಅಥವಾ ಹೊಸ ಪದ ಮತ್ತು ಅರ್ಥ ಬರೆಯಬೇಕು’ ಎಂಬ ನಿಯಮ ಮಾಡಿದೆ. ಈ ವಿಧಾನ ತುಸು ಫಲಕಾರಿಯಾದುದು ಅನ್ನಿಸಿತು. ಪ್ರಸ್ತುತ `ನಿಯಮ’ದ ಅರಿವಿದ್ದೂ ತಡವಾಗಿ ಬಂದವರಿಗೆ ಬರಹಶಿಕ್ಷೆ (ಇಂಗ್ಲಿಷ್‌ನ ಇಂಪೊಸಿಷನ್ ಪದಕ್ಕೆ ಕನ್ನಡ ಸಂವಾದಿಯಾಗಿ ಬಳಸುತ್ತಿದ್ದೇನೆ!) ಕೊಟ್ಟು ಅವರು ಬರೆದದ್ದನ್ನು ತರಗತಿಯ ಕೊನೆಯಲ್ಲಿ ನೋಡಿ ತಿದ್ದಿ ಕೊಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ದಿನೇ ದಿನೇ, ತರಗತಿಗಳಿಗೆ ತಡವಾಗಿ ಬರುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿದೆ ಅನ್ನುವುದು ಒಂದು ಸಮಾಧಾನದ ಸಂಗತಿ ಎನ್ನಬಹುದು. ಜೊತೆಗೆ, ತರಗತಿಗೆ ತಡವಾಗಿ ಬಂದ ವಿದ್ಯಾರ್ಥಿಗಳೂ ಸಹ ನಾನು ವಿಧಿಸುವ `ಬರಹಶಿಕ್ಷೆ’ಯಿಂದಾಗಿ ಒಂದಷ್ಟು ಗಾದೆಮಾತು, ಹೊಸ ಪದಗಳಿಗೆ ಅರ್ಥ ಮುಂತಾದವನ್ನು ಕಲಿಯುತ್ತಾರೆ. ಇದರಿಂದಾಗಿ ಅವರ ಭಾಷೆಯಲ್ಲಿ ತುಸುವಾದರೂ ಉತ್ತಮಿಕೆ ಆಗುತ್ತದಲ್ಲಾ ಎಂಬುದು ಸಹ ತುಸು ನೆಮ್ಮದಿ ಕೊಡುತ್ತದೆ. ಒಟ್ಟಿನಲ್ಲಿ ನಾವು ವಿದ್ಯಾರ್ಥಿಗಳಿಗೆ ಏನು ಕಲಿಸುತ್ತೇವೋ, ಎಷ್ಟು ಕಲಿಸುತ್ತೇವೋ ಅದಕ್ಕಿಂತ ಹೆಚ್ಚಿನದ್ದನ್ನು – ಮುಖ್ಯವಾಗಿ ಮಾನವ ಸಂಪನ್ಮೂಲವನ್ನು ನಿರ್ವಹಿಸುವುದನ್ನು – ನಾವು ಕಲಿಯುತ್ತೇವೆ ಅನ್ನಬಹುದು.