ಓದುವ ಆಸಕ್ತಿ ಇರುವ ಮನೆಯಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ ಅವರಿಗೇ ಅರಿವಿಲ್ಲದಂತೆ ಪುಸ್ತಕಗಳು ಸಂಗಾತಿಗಳಾಗಿಬಿಡುತ್ತವೆ. ನಾನು ಇಂತಹದೊಂದು ಮನೆಯಲ್ಲಿ ಹುಟ್ಟಿದ್ದು ನನ್ನ ಅದೃಷ್ಟ ಅನ್ನಬೇಕು. ವೃತ್ತಿಯಿಂದ ನಗರ ಯೋಜನ ಇಲಾಖೆಯಲ್ಲಿ ಕಿರಿಯ ಯಂತ್ರಜ್ಞಾನಿ(ಇಂಜಿನಿಯರ್) ಆಗಿದ್ದ ನನ್ನ ತಂದೆಯವರು, ತಮ್ಮ ಸೋದರರ ಹಾಗೂ ಸೋದರಿಯ ಕಾರಣದಿಂದಾಗಿ, ರಾಮಕೃಷ್ಣಾಶ್ರಮದ ಗಾಢವಾದ ಪರಿಚಯ, ಸಂಪರ್ಕಗಳನ್ನು ಹೊಂದಿದ್ದರು. ಹೀಗಾಗಿ ಅಲ್ಲಿನ `ಬದುಕಲಿ ಕಲಿಯಿರಿ’ ಮುಂತಾದ ಪುಸ್ತಕಗಳು ನಮ್ಮ ಮನೆಯಲ್ಲಿ ಸದಾ ಇರುತ್ತಿದ್ದವು. ಇನ್ನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ನನ್ನ ತಾಯಿಯವರು ಸುಧಾ, ತರಂಗ ಮುಂತಾದ ಕನ್ನಡ ವಾರ ಪತ್ರಿಕೆಗಳು, ಮಯೂರ, ತುಷಾರ ಮುಂತಾದ ಕನ್ನಡ ಮಾಸಪತ್ರಿಕೆಗಳನ್ನು ನಿಯಮಿತವಾಗಿ ಓದುತ್ತಿದ್ದರು. ಡೆಕ್ಕನ್ ಹೆರಾಲ್ಡ್, ಕನ್ನಡ ಪ್ರಭ ದಿನಪತ್ರಿಕೆಗಳಂತೂ ಇದ್ದೇ ಇರುತ್ತಿದ್ದವು. ಜೊತೆಗೆ ಇಂಗ್ಲೀಷಿನ `ದ ವೀಕ್’, `ರೀರ್ಸ್ ಡೈಜೆಸ್ಟ್’ ಬರುತ್ತಿದ್ದವು. ಇನ್ನು ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಾದ ನಾನು ಹಾಗೂ ನನ್ನ ತಮ್ಮನಿಗಾಗಿ `ಅಮರ ಚಿತ್ರ ಕಥಾ’ ಮುಂತಾದ ಕಾಮಿಕ್ ಪುಸ್ತಕಗಳು, `ಚಂದಮಾಮ’, `ಬಾಲಮಿತ್ರ’…… ಓಹ್! ಈಗ ನೆನಪಿಸಿಕೊಂಡರೆ ಚಿಕ್ಕ ವಯಸ್ಸಿನಲ್ಲೇ ನಮಗೆ ಎಷ್ಟೆಲ್ಲ ಪುಸ್ತಕಗಳ ಪರಿಚಯ ಆಗಿತ್ತಲ್ಲ ಅನ್ನಿಸುತ್ತದೆ.
ಪುಸ್ತಕಗಳ ಈ ನಿಡುಗಾಲದ ಸಹವಾಸದಿಂದಾಗಿ ಮುಂದೆ ನನ್ನದೇ ಮನೆ ಅಂತ ಆದಾಗಲೂ ಮನೆ ತುಂಬ ಪುಸ್ತಕಗಳಿರುತ್ತಿದ್ದವು. ಈ ಪುಸ್ತಕ ಸಂಗಾತವು ನನ್ನ ದೊಡ್ಡ ಮಗಳು ರಶ್ಮಿಯ ಕನ್ನಡ ಕಲಿಕೆಯಲ್ಲಿ ನೆರವಿಗೆ ಬಂತು. ಹೇಗೆ ಎಂದು ಹೇಳುತ್ತೇನೆ.
ಸುಮಾರು ೨೦-೨೫ ವರ್ಷಗಳ ಹಿಂದೆ `ತುಂತುರು’ ಎಂಬ ವಾರಪತ್ರಿಕೆಯು ಮಕ್ಕಳಿಗಾಗಿ ಬರುತ್ತಿತ್ತು. ದೊಡ್ಡ ದೊಡ್ಡ ಅಕ್ಷರಗಳು, ಬಣ್ಣ ಬಣ್ಣದ ಚಿತ್ರಗಳಿರುತ್ತಿದ್ದ ಮುದ್ದಾದ ಪತ್ರಿಕೆ ಅದು. ರಶ್ಮಿಗಾಗಿ ಅದನ್ನು ತರಿಸುತ್ತಿದ್ದೆ ನಾನು. ಅವಳಿಗೆ ಅದರಿಂದ ಕಥೆಗಳನ್ನು ಓದಿ ಹೇಳುತ್ತಿದ್ದೆ. ಅವಳು ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ, ಅವಳಿಗೆ ತಾನಾಗಿ ಓದುವುದನ್ನು ಕಲಿಸಲು ಒಂದು ಉಪಾಯ ಮಾಡಿದೆ. `ತುಂತುರು’ವಿನಲ್ಲಿ ಬಂದ ಯಾವುದಾದರೂ ಕಥೆಯ ಮುಕ್ಕಾಲು ಭಾಗವನ್ನು ನಾನು ಓದುತ್ತಿದ್ದೆ. ಉಳಿದ ಕಾಲು ಭಾಗ ಕಥೆಯನ್ನು ತಾನೇ ಓದುವಂತೆ ಅವಳಿಗೆ ಹೇಳುತ್ತಿದ್ದೆ. ಅವಳ ಬಾಲ ಮನಸ್ಸಿಗೆ ಇದರಿಂದ ತುಸು ಅಸಾಮಾಧಾನ ಆಗುತ್ತಿತ್ತೋ ಏನೋ. ಆದರೂ ಕಥೆಯನ್ನು ಪೂರ್ತಿ ತಿಳಿದುಕೊಳ್ಳುವ ಕುತೂಹಲದಿಂದ ಆ ಮಗು ಕನ್ನಡವನ್ನು ನಿಧನಿಧಾನಕ್ಕೆ ಓದಿ ಅರ್ಥ ಮಾಡಿಕೊಳ್ಳಲು ಕಲಿಯಿತು. ಕಥೆಯ ಮಟ್ಟಿಗೆ ಕಥೆಯೂ ಪೂರ್ತಿ ಗೊತ್ತಾಗುತ್ತಿತ್ತು, ಈ ಕಡೆ ಓದಿಗೆ ಓದೂ ಅಭ್ಯಾಸವಾಗುತ್ತಿತ್ತು.
ಮುಂದೆ ಹಲವು ವರ್ಷಗಳ ಕಾಲ ರಶ್ಮಿ ಮತ್ತು ತುಂತುರು ಬಿಡಿಸಲಾಗದ ಜೋಡಿಯಾಗಿಬಿಟ್ಟಿದ್ದರು! ಬಹುಶಃ ನಮ್ಮ ರಶ್ಮಿಯ ಕನ್ನಡ ಓದಿನ ಕಲಿಕೆಯಲ್ಲಿ ಅವಳಿಗೇ ಅರಿವಾಗದಂತೆ `ತುಂತುರು’ ಒಂದು ಮುಖ್ಯಪಾತ್ರವನ್ನು ವಹಿಸಿತು, ಆಟದಲ್ಲಿ ಪಾಠವೆಂಬOತೆ! ಪುಸ್ತಕಗಳ ಇಂದ್ರಜಾಲವೇ ಅದಲ್ಲವೇ?