ಪ್ರಣತಿ ನನ್ನ ಇಬ್ಬರು ಮಕ್ಕಳಲ್ಲಿ ಚಿಕ್ಕವಳು. ಈಗ ಅವಳಿಗೆ ಹದಿನೆಂಟು ವರ್ಷ. ಎರಡು ವರ್ಷಗಳ ಹಿಂದೆ ಅಂದರೆ ಅವಳಿಗೆ ಹದಿನಾರು ವರ್ಷವಾಗಿದ್ದಾಗ ನಡೆದಿದ್ದ ಪ್ರಸಂಗವೊಂದನ್ನು ಇಲ್ಲಿ ಬರೆಯುತ್ತಿದ್ದೇನೆ.

ಪ್ರಣತಿ ಆಗಷ್ಟೇ ಮೊದಲನೇ ಪಿಯುಸಿ ಮುಗಿಸಿ ಎರಡನೇ ಪಿಯುಸಿಗೆ ಹೋಗುವವಳಿದ್ದಳು. `ಅಮ್ಮ, ಪೋಮೋಗ್ರೆನೇಟ್ ಇದ್ಯಾ?, `ಮಾಮ್, ಐ ನೀಡ್ ಬ್ರೇಕ್‌ಫಾಸ್ಟ್, `ಕಿತ್ಳೆ ಅಂದ್ರೆ ಯಾವ ಹಣ್ಣು? ಇದು ಅವಳ ಮಾತಿನ ಶೈಲಿ! ಹತ್ತನೇ ತರಗತಿಯವರೆಗೂ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಓದಿದವಳು. ಶಾಲೆಯಲ್ಲಿ ಓದುವಾಗ ಪರೀಕ್ಷೆಯಲ್ಲಿ ಕನ್ನಡದಲ್ಲಿ ಒಳ್ಳೆ ಅಂಕ ಪಡೆಯುತ್ತಿದ್ದಳಾದರೂ ಅವಳಲ್ಲಿ ಅಂತಹ ಸುಪ್ರಕಟ ಕನ್ನಡ ಪ್ರೀತಿಯನ್ನೇನೂ ನಾನು ಗಮನಿಸಿರಲಿಲ್ಲ. ಮನೆಯಲ್ಲಿರುವ ನೂರಾರು ಕನ್ನಡ ಪುಸ್ತಕಗಳ ಬಗ್ಗೆ ಅವಳಿಗೆ ಕುತೂಹಲವೇನಿರಲಿಲ್ಲ. ಒಮ್ಮೊಮ್ಮೆ, ತಿಂಗಳ ಪತ್ರಿಕೆ ಮಯೂರ ಮಾಸಪತ್ರಿಕೆಯ `ಅಂಗೈಯಲ್ಲಿ ಅರಮನೆ ಅಂಕಣವನ್ನು ಒಂಚೂರು ತಿರುವಿ ಹಾಕಿದರೆ ಅವಳ ಕನ್ನಡ ಆಸಕ್ತಿ ತೀರಿಬಿಡುತ್ತಿತ್ತು. ಅವಳು ಸ್ವಲ್ಪ ಕಲಿತಿದ್ದ ಹಿಂದೂಸ್ತಾನಿ ಸಂಗೀತ, `ವಿಜಯನಗರ ಬಿಂಬದ ನಾಟಕ ಶಿಬಿರಗಳು, ನಾನು ಕೊಡುತ್ತಿದ್ದ ಎಷ್ಟೋ ಕನ್ನಡ ಪುಸ್ತಕಗಳು ಯಾವುದೂ ಅವಳ ಕನ್ನಡಾಸಕ್ತಿಯನ್ನು ಅಷ್ಟೇನೂ ಬಡಿದೆಬ್ಬಿಸುವಂತೆ ಕಾಣುತ್ತಿರಲಿಲ್ಲ. ಅವಳು ಓದಿದ್ದ ಆಂಗ್ಲಭಾಷಾ ಮಾಧ್ಯಮವು ಇದಕ್ಕೆ ಕಾರಣವಿರಬಹುದೇ ಎಂದು ಆಗಾಗ ನಾನು ಯೋಚಿಸುತ್ತಿದ್ದೆ. ಇದು ಸಾಲದು ಎಂಬಂತೆ ಅವಳು ಇಷ್ಟಪಟ್ಟು ಸೇರಿದ್ದ ಸಿಬಿಎಸ್‌ಇ ಶಾಲೆಯ ಹನ್ನೊಂದು-ಹನ್ನೆರಡನೇ ತರಗತಿಯಲ್ಲಿ ಕನ್ನಡವೇ ಇರಲಿಲ್ಲ! ಇಂಗ್ಲೀಷೊಂದೇ ಭಾಷೆ!

ಈ ಮಗುವಿನಿಂದ ಕನ್ನಡ ಭಾಷೆ ದೂರವಾಗುತ್ತಿದೆಯಲ್ಲ ಎಂಬ ನೋವಿನ ಭಾವ ನನ್ನೊಳಗೆ ಆಗಾಗ ಕುಟುಕುತ್ತಲೇ ಇತ್ತು. ನನ್ನ ದೊಡ್ಡ ಮಗಳು ರಶ್ಮಿಯೊಂದಿಗೆ ಅವಳು ಕೆಲವು ಸಲ ಇಂಗ್ಲೀಷಿನಲ್ಲಿ ಮಾತಾಡುವಾಗ `ಮಕ್ಳಾ, ಕನ್ನಡದಲ್ಲಿ ಮಾತಾಡ್ರಮ್ಮ ಎಂದು ಹೇಳುತ್ತಿದ್ದೆ. `ಸದ್ಯ ನಮ್ಮ ಮನೆಯಲ್ಲಿ ಕನ್ನಡ ಮಾತಾಡುವುದೊಂದು ರೂಢಿ ಇದೆಯಲ್ಲಪ್ಪ ಎಂದು ಯೋಚನೆ ಮಾಡುತ್ತಿದ್ದೆ. ಏನೇ ಆದರೂ, ಈ ಮುದ್ದು ಹುಡುಗಿಯ ಮಟ್ಟಿಗೆ ಕನ್ನಡ ಬರೀ ದೈನಂದಿನ ವ್ಯವಹಾರದ ಪುಡಿಮಾತಿನ ಭಾಷೆಯಾಗಿ ಉಳಿದುಬಿಡುತ್ತೆ ಎಂಬ ವಿಚಾರ ಮನಸ್ಸಿಗೆ ಬಂದಾಗಲೆಲ್ಲ ಬೇಜಾರೆನ್ನಿಸುತ್ತಿತ್ತು.

ಬೇಸರ ಮಾಡಿಕೊಂಡು ಸುಮ್ಮನೆ ಕುಳಿತುಕೊಳ್ಲುವಂತಿರಲಿಲ್ಲವಲ್ಲ, ಏನಾದರೂ ಮಾಡಬೇಕಿತ್ತು. ಮನೆಯಲ್ಲಿ ತೇಜಸ್ವಿ ಅವರ ಸಮಗ್ರ ಸಾಹಿತ್ಯ ಇಟ್ಟಿದ್ದೇನೆ. ಅವರ ಸರಳ, ಹಾಸ್ಯಮಯ ಶೈಲಿಯ ಕನ್ನಡ ಓದಲು ಪ್ರಣತಿಗೆ ಇಷ್ಟವಾಗಬಹುದು ಅನ್ನಿಸಿ, ಅವರ `ಕರ್ವಾಲೊ ಕಾದಂಬರಿ ಕೊಟ್ಟು, “ಇದನ್ನು ಓದು ಪುಟ್ಟಿ, ನಿಂಗೆ ಇಷ್ಟ ಆಗ್ಬಹುದು ಅಂದೆ. `ಹುಂ … ಅಂದವಳು ಒಂದು ಸಲ ಕೈಯಲ್ಲಿ ಹಿಡಿದು ನೋಡಿ ಪಕ್ಕಕ್ಕಿಟ್ಟಳು. `ಓದಿದ್ರೆ ನಿಂಗೆ ಇಷ್ಟವಾಗಿರೋ ತಿಂಡಿ ಕೊಡಿಸ್ತೀನಿ ಎಂಬ ಆಸೆ ಬೇರೆ ತೋರಿಸಿದೆ. ಅದರಿಂದಲೂ ಅಂಥ ಹೆಚ್ಚಿನ ಉತ್ಸಾಹವೇನೂ ಅವಳಲ್ಲಿ ಮೂಡಿದಂತೆ ಕಾಣಲಿಲ್ಲ.

ಸರಿ, ಇನ್ನೊಂದು ಉಪಾಯ ಮಾಡೋಣ ಅನ್ನಿಸಿ, “ದಿನಾ ನಾನು ಈ ಕಾದಂಬರಿಯ ಒಂದು ಪುಟ ಓದ್ತೀನಿ, ಕೇಳಿಸಿಕೊಳ್ತೀಯಾಮ್ಮ? ಅಂದೆ. ಏನನ್ನಿಸಿತೋ. `ಆಗ್ಲಿ ಎಂದು ಒಪ್ಪಿಬಿಟ್ಟಳು. ಅದು ಕೊರೋನಾ ಲಾಕ್‌ಡೌನ್ ಅವಧಿ ಆದದ್ದರಿಂದ ನಾನು ಬೆಳಿಗ್ಗೆ ಎದ್ದು ಕಾಲೇಜಿಗೆ ಓಡಿಹೋಗುವುದೇನಿರಲಿಲ್ಲ. ಅವಳಿಗೂ ಆಗ ರಜಾ ಅವಧಿ ಇತ್ತು. ಹೀಗಾಗಿ ದಿನದಲ್ಲಿ ಹದಿನೈದು-ಇಪ್ಪತ್ತು ನಿಮಿಷ ಸಮಯವನ್ನು ಬಳಸಿಕೊಂಡು ಕರ್ವಾಲೋ ಕಾದಂಬರಿಯನ್ನು ಅವಳು ಮತ್ತು ನಮ್ಮ ನಿಡುಗಾಲದ ಸುಮನಸ್ಸಿನ ಸಹಾಯಕಿ ಯಲ್ಲಮ್ಮ(ಇವರು ಕನ್ನಡ ಕಲಿತ ಬಗ್ಗೆ ಇನ್ನೊಂದು ಪ್ರಸಂಗದಲ್ಲಿ ಬರೆದಿದ್ದೇನೆ)ರ ಮುಂದೆ ಓದಲಾರಂಭಿಸಿದೆ. ತೇಜಸ್ವಿಯವರ ಲವಲವಿಕೆಯ, ಅಂತರ್ಗತ ಹಾಸ್ಯಪ್ರಜ್ಞೆಯ ಕನ್ನಡ ಕೇಳಿ ಅವರ ಸಾಹಿತ್ಯ ಹಾಗೂ ಒಟ್ಟು ಕನ್ನಡದ ಬಗ್ಗೆ ಇಷ್ಟವು ಪ್ರಣತಿಯಲ್ಲಿ ಮೂಡಬಹುದೇನೋ ಎಂಬ ಆಸೆ ನನ್ನಲ್ಲಿತ್ತು.

ಸರಿ. ಕರ್ವಾಲೋ ಓದಿದೆ. ಅದನ್ನು ಓದಿ ಮುಗಿಸಲು ಇಪ್ಪತ್ಮೂರು ದಿನ ಹಿಡಿದವು. ಸೋಫಾದಲ್ಲೋ, ದಿವಾನ್‌ನಲ್ಲೋ ಕುಳಿತೋ, ಮಲಗಿಯೋ ಕೆಲವೊಮ್ಮೆ ನಿದ್ದೆ ಬರುತ್ತಿದೆಯೇನೋ ಎಂಬ ಚರ್ಯೆಯೊಂದಿಗೆ ನಾನು ಓದುವುದನ್ನು ಕೇಳಿಸಿಕೊಳ್ಳುತ್ತಿದ್ದಳು ನನ್ನ ಮಗಳು! ಕೆಲವೊಮ್ಮೆ ಯಲ್ಲಮ್ಮನ ತೊಡೆಯ ಮೇಲೆ ಮಲಗಿ, ಇನ್ನು ಕೆಲವೊಮ್ಮೆ ಅರೆಗಣ್ಣು ಮುಚ್ಚಿ ಕಥೆ ಕೇಳಿಸಿಕೊಳ್ಳುತ್ತಿದ್ದಳು. “ನಿನಗೆ ದಿನಕ್ಕೆ ಎಷ್ಟು ಬೇಕೋ ಅಷ್ಟೇ ಓದ್ತೀನಿ, ಬಲವಂತ ಮಾಡಲ್ಲ ಪುಟ್ಟಿ ಎಂದು ಹೇಳಿದ್ದೆ. ಅವಳು ಸಾಕು ಎಂದು ಸನ್ನೆ ಮಾಡಿದ ತಕ್ಷಣ ನಿಲ್ಲಿಸಿಬಿಡುತ್ತಿದ್ದೆ.

ಓದಿ ಮುಗಿಸಿದ ದಿನ ನನಗೆ ತುಂಬ ಖುಷಿ ಅನ್ನಿಸಿತು. ಹಾರುವ ಓತಿ ಕೈಗೆ ಸಿಗದೆ ತಪ್ಪಿಸಿಕೊಳ್ಳುವ ಅಂತ್ಯ ಕೇಳಿಸಿಕೊಂಡಾಗ ಪ್ರಣತಿ “ಓಹ್, ವ್ಹಾಟ್ ಎ ಸುಪರ್ಬ್ ನಾವೆಲ್! ಎಂದು ಖುಷಿಯಿಂದ ಉದ್ಗರಿಸಿದಳು. “ಹೇಗನ್ನಿಸ್ತು? ನಿಧಾನಕ್ಕೆ ಹೇಳು ಪುಟ್ಟಿ ಅಂದೆ. “ಅಮ್ಮ, ಆ ಹಾರುವ ಓತಿ ಕರ್ವಾಲೊ ಅವರಿಗೆ ಸಿಗದೇ ಇದ್ದದ್ದೇ ಒಳ್ಳೇದಾಯ್ತು, ಸಿಕ್ಕಿದ್ರೆ ಈ ಕಾದಂಬರಿ ಇಷ್ಟು ಚೆನ್ನಾಗಿರ್‍ತಿರಲಿಲ್ಲ ಅಂದಳು.

ಇಂದಿನ ಪೀಳಿಗೆಯವರಿಗೆ ಕನ್ನಡದಲ್ಲಿ ಆಸಕ್ತಿ ಹುಟ್ಟಿಸುವಲ್ಲಿ ತೇಜಸ್ವಿಯವರ ಕೊಡುಗೆ ತುಂಬ ದೊಡ್ಡದು ಎಂಬುದು ನನ್ನ ಅನಿಸಿಕೆ.