`ಮೊಮ್ಮಗಂಗೆ ಹುಷಾರಿರಲಿಲ್ಲ ಕಣ್ರಮ್ಮ, ಡಾಕ್ಟರ್ ಹತ್ರ ರ‍್ಕೊಂಡು ಹೋಗಿದ್ದೆ’’ ಅಂತ ನಮ್ಮ ಮನೆಯಲ್ಲಿ ಅನೇಕ ವರ್ಷದಿಂದ ಮನೆವಾಳ್ತೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಯಲ್ಲಮ್ಮ ಹೇಳಿದಾಗ `ಈಗ ಹೇಗಿದಾನೆ ಮಗು?’ ಎಂದು ಕೇಳಿದೆ. `ನಮ್ಮ ಲೊಡ್ಡೆ ಡಾಕ್ಟರ್ ಕೈಗುಣಾನೇ ಕೈಗುಣ ಅಮ್ಮ. ಅವ್ರು ಒಂದು ಸಲ ನೋಡಿದ್ರೆ ಸಾಕು ರೋಗ ವಾಸಿಯಾಯ್ತು ಅಂತಾನೇ ಅರ್ಥ’’ ಅಂದರು ಯಲ್ಲಮ್ಮ.  `ಲೊಡ್ಡೆ ಡಾಕ್ಟರ್’ ಎಂಬ ಪದದಿಂದ ನನ್ನಲ್ಲಿ ಕುತೂಹಲವುಂಟಾಗಿ `ಯಾಕಮ್ಮ ಅವರನ್ನ ಹಾಗೆ ಕರೀತಿರಿ? ಆ ಡಾಕ್ಟರ್ ಹೆಸರೇನು?’ ಎಂದು ಕೇಳಿದೆ. `ಅಮ್ಮ ಅವರು ಬರಿಯೋದು ಮತ್ತೆ ಇಂಜಲ್‌ಕ್ಸನ್(ಇಂಜೆಕ್ಷನ್) ಕೊಡೋದು ಎಲ್ಲಾ ಎಡಗೈನಲ್ಲೇ. ಅದಕ್ಕೇ ಅರ‍್ನ ಎಲ್ರೂ ಲೊಡ್ಡೆ ಡಾಕ್ಟರ್ ಅಂತ ಕರೀತಾರೆ. ಆದ್ರೆ ಅವರ ಹೆಸರೇನು ಅಂತ ಯಾರಿಗೂ ಗೊತ್ತಿಲ್ಲಮ್ಮ. ಆದರೆ ಅವರ ಕ್ಲಿನಿಕ್ಕಲ್ಲಿ ಯಾವಾಗ್ಲೂ ಜನಾ ಅಂದ್ರೆ ಜನ’ ಅಂದರು. “ಅವರ ಕ್ಲಿನಿಕ್ಕಿಗೆ ಒಂದು ಬೋರ್ಡು ಅಂತ ಇರುತ್ತೆ ಅಲ್ವಾ, ಅಲ್ಲಿ ಅವರ ಹೆಸರು ಇರಬೇಕಲ್ವಾ ಯಲ್ಲಮ್ಮ?’’ ಎಂದು ನಾನು ಕೇಳಿದೆ. `ರ‍್ಬೋದೇನೋ ಅಮ್ಮ, ನಮ್ಮಲ್ಲಿ ಓದಕ್ಕೆ ಬರಿಯಕ್ಕೆ ಬರೋರು ಕಡಿಮೆ ಅಲ್ವರಾ? ಅದಕ್ಕೇ ಡಾಕ್ಟರ್ ಹೆಸರಿನ ಬಗ್ಗೆ ಯಾರೂ ತಲೆ ಕೆಡಿಸಿಕೊಂಡ ಹಾಗೆ ಕಾಣೆ. ಮೂವತ್ತೊಂದು ನಲವತ್ತು ವರ್ಷಗಳಿಂದ ಅವ್ರು ಒಳ್ಳೆ ಔಸ್ದಿ ಕೊಡ್ತಾನೇ ಇದಾರಮ್ಮ. ಅವರ ಕೈಗುಣ ಬಾಳ ಒಳ್ಳೇದು, ಆದ್ರೆ ದುಡ್ಡು ಜಾಸ್ತಿ ಈಸ್ಕೊಳಲ್ಲಮ್ಮ. ಬಡವರಿಗೆ ಹೇಳಿ ಮಾಡ್ಸಿದ ಡಾಕ್ಟರ್ ಅವ್ರು. ನಮ್ಮ ಮನೆ ಹತ್ರ ಇರೋ ಮಂಗಳಮುಖಿಯರು ಕೂಡ ಈ ಡಾಕ್ಟರ್ ಹತ್ರಾನೇ ಹೋಗೋದು, ಅವ್ರಿಗೂ ಅದೇ ಒಳ್ಳೆ ಮನಸ್ಸಿನಿಂದ ಓಷಧಿ ಕೊಡ್ತಾರೆ, ಚೂರೂ ಕೂಡ ಭೇದ ಮಾಡಲ್ಲ ನಮ್ಮ ಲೊಡ್ಡೆ ಡಾಕ್ಟರ್ ’’ ಅಂದರು.

ಈ ಸನ್ನಿವೇಶದ ಬಗ್ಗೆ ಕೇಳಿ ನನಗೆ ಒಂದು ರೀತಿ ದಿಗ್ಭ್ರಮೆ ಮತ್ತು ಆಶ್ಚರ್ಯ ಎರಡೂ ಆದವು. ಇಷ್ಟು ಒಳ್ಳೆ ಹೆಸರು ಪಡೆದಿರುವ ವೈದ್ಯರ ನಿಜ ಹೆಸರೇ ಅವರ ಬಳಿ ಬರುವ ಜನರಿಗೆ ಗೊತ್ತಿಲ್ಲ! ಯಾಕೋ ಒಮ್ಮೆ ಅವರನ್ನು ನಾನು ಒಮ್ಮೆ ನೋಡಬೇಕು, ಭೇಟಿ ಮಾಡಿ ಮಾತಾಡಬೇಕು ಅನ್ನಿಸಿತು. ಕಳೆದ ಮೂವತ್ತೊಂದು – ನಲವತ್ತು ವರ್ಷಗಳಿಂದ ಬೆಂಗಳೂರಿನ ಬಾಪೂಜಿ ನಗರದ ಬಡ ಜನಗಳಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಈ `ಲೊಡ್ಡೆ ಡಾಕ್ಟರ್’ ಎಂಬ ನಿಸ್ವಾರ್ಥ ಜೀವಿಯನ್ನು ನೋಡಬೇಕು ಎಂಬ ಆಸೆಯಾಯಿತು. ನನ್ನ  ಈ ಆಸೆಯನ್ನು ಯಲ್ಲಮ್ಮನಿಗೆ ತಿಳಿಸಿದೆ.

ನಾನು ಮತ್ತು ಯಲ್ಲಮ್ಮ `ಲೊಡ್ಡೆ ಡಾಕ್ಟರ್’ ನ್ನ ನೋಡಲು ಹೋದಾಗ ಏರುಹೊತ್ತು ಸುಮಾರು ೧೧.೩೦ ಗಂಟೆ. ರಮ್ಜಾನ್ ಹಬ್ಬದ ದಿನ ಅವತ್ತು. `ಅಶ್ವಿನಿ’ ಕ್ಲಿನಿಕ್ಕಿನಲ್ಲಿ ಹೆಚ್ಚು ಜನ ಇರಲಿಲ್ಲ. ಬೋರ್ಡಿನ ಮೇಲಿದ್ದ ಡಾಕ್ಟರರ ಹೆಸರನ್ನು ಓದಿದೆ. `ಡಾ.ಯು.ಶ್ರೀಪತಿ ಕಾರಂತ್’. ಅವರನ್ನು ಭೇಟಿ ಮಾಡಲು ಹೋದಾಗ ನಾನು ಕಂಡದ್ದು ಹೆಚ್ಚು ಎತ್ತರವಿಲ್ಲದ, ಸಪೂರ ಮೈಕಟ್ಟಿನ, ಸ್ವಚ್ಛ ಉಡುಪಿನ, ಮಂಗಳೂರು- ಉಡುಪಿ ಕಡೆಯ ಜನರ ಚಹರೆ ಇದ್ದ ಒಬ್ಬ ಸರಳ ವ್ಯಕ್ತಿಯನ್ನು. ತುಂಬ ಮಿತಭಾಷಿ ಆತ. ಅವರ ಮಾತೆಲ್ಲವೂ ಅವರ ಕೊಡುವ ಒಳ್ಳೆಯ ಔಷಧ ಮತ್ತು ಅವರ ಸೇವಾ ಮನೋಭಾವದಲ್ಲೇ ಇದೆ ಅನ್ನಿಸಿತು. `ನಿಮ್ಮ ಬಗ್ಗೆ ತುಂಬ ಕೇಳಿದೀನಿ, ತುಂಬ ಒಳ್ಳೆ ಕೆಲಸ ಮಾಡ್ತಿದೀರ ಡಾಕ್ಟರ್’ ಎಂಬ ಎರಡು ಮಾತುಗಳ ವಿನಃ ಇನ್ನೇನೂ ಮಾತಾಡಲಾಗಲಿಲ್ಲ ನನಗೆ. `ಶಬ್ದಕ್ಕೆ ಲಜ್ಜೆಯಾದುದು ನೋಡಾ’ ಎಂಬ ಅಲ್ಲಮನ ಮಾತು ನೆನಪಾಯಿತು. ಆ ಉದಾತ್ತ ಜೀವದ ಮೌನಸೇವೆಯೇ ಎಲ್ಲವನ್ನೂ ಹೇಳುವಾಗ ಇನ್ನು ಮಾತಿಗೇನು ಕೆಲಸ? ಅವರಿಗೆ ಕೈಮುಗಿದು ಹೊರಬಂದೆ. ಎಲೆಮರೆ ಕಾಯಿಯಂತೆ ತಮ್ಮ ಪಾಢಿಗೆ ತಾವು ಸೇವೆ ಸಲ್ಲಿಸುತ್ತಿರುವ ಇಂತಹ `ಲೊಡ್ಡೆ ಡಾಕ್ಟರ್’ಗಳಿಂದಲೇ ಅಲ್ಲವೇ, ಮನುಷ್ಯರ ಒಳ್ಳೆಯತನಕ್ಕೆ ಅರ್ಥ ಉಳಿದಿರುವುದು’ ಅನ್ನಿಸಿತು.