ಕನ್ನಡ ಅಧ್ಯಾಪಕರಿಗೆ ತರಗತಿಗಳಲ್ಲಿ ಕೇವಲ ಭಾಷಾ ಪ್ರಪಂಚದ ಅನುಭವಗಳು ಮಾತ್ರವಲ್ಲ, ಸಮಾಜ ದ ಬಗೆಗಿನ ಅನಿರೀಕ್ಷಿತ ಒಳನೋಟಗಳೂ ಸಿಗುತ್ತವೆ.
ಕೆಲವು ವರ್ಷಗಳ ಹಿಂದೆ ಒಮ್ಮೆ ನಾನು ಕೆಲಸ ಮಾಡುತ್ತಿದ್ದ ಒಂದು ಕಾಲೇಜಿನ ಮೂರನೇ ವರ್ಷದ ಬಿ.ಎ. ಐಚ್ಛಿಕ ಕನ್ನಡ ತರಗತಿಯಲ್ಲಿ, ಭಾಷಾವಿಜ್ಞಾನದ ಪಾಠದ ಭಾಗವಾಗಿ, ಸಾಮಾಜಿಕ ಭಾಷಾರೂಪಗಳನ್ನು ಕುರಿತು ವಿವರಿಸುತ್ತಿದ್ದೆ. ಸಮಾಜದ ಬೇರೆ ಬೇರೆ ಜನವರ್ಗದವರು ಕನ್ನಡವನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಕುರಿತಾದ ಪಾಠ ಅದು. ತರಗತಿಯ ಏಕತಾನತೆಯನ್ನು ಮುರಿಯುವುದಕ್ಕೋಸ್ಕರ ನಾನು ಕೆಲವು ಭಾಷಾ ಪ್ರಯೋಗಗಳನ್ನು ಹೇಳಿ, `ಇದನ್ನು ಯಾರು ಹೇಳಿರಬಹುದು ಹೇಳಿ? ಎಂದು ವಿದ್ಯಾರ್ಥಿಗಳನ್ನು ಕೇಳುತ್ತಿದ್ದೆ. ಅಂಗಡಿ ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ಗೃಹಿಣಿಯರು, ಕಲಾವಿದರು, ಮಕ್ಕಳು, ವೃದ್ಧರು ……….. ಹೀಗೆ ಬೇರೆ ಬೇರೆಯವರು ಮಾತಾಡುವ ರೀತಿಗಳನ್ನು ತೋರಿಸಿಕೊಡುತ್ತಾ, ವಿದ್ಯಾರ್ಥಿಗಳಿಗೆ ಅವುಗಳನ್ನು ಗುರುತಿಸಲು ಹೇಳುತ್ತಾ ಇದ್ದೆ. ಅದರಲ್ಲಿ ಒಂದು ಮಾತು ಹೀಗಿತ್ತು – “ನೋಡೇಮ್ಮಾ, ಇವತ್ತು ನಾನು ಟಿಫಿನ್ ಖಾಲಿ ಮಾಡಕ್ಕೆ ಆಗ್ಲಿಲ್ಲ ಗೊತ್ತಾ? ಅಮ್ಮ ನೋಡಿದ್ರೆ ಬೈಯ್ತಾರೆ. ಸ್ವಲ್ಪ ಜಾಗ ಬಿಡೇಮ್ಮಾ ….. ವ್ಯಾನು ಮನೆ ತಲುಪೋವಷ್ಟ್ರಲ್ಲಿ ಕಿಟಕಿಯಿಂದ ಇದನ್ನ ಚೆಲ್ಲಿಬಿಡ್ತೀನಿ. ವಿದ್ಯಾರ್ಥಿಗಳನ್ನು ನಾನು ಕೇಳಿದೆ, “ಇದನ್ನು ಯಾರು ಹೇಳಿರ್ಬಹುದು? ಹೇಳಿ ನೋಡೋಣ. ಒಂದೆರಡು ನಿಮಿಷ ಮೌನ. ನಂತರ ಒಬ್ಬ ವಿದ್ಯಾರ್ಥಿನಿ ಎದ್ದು ನಿಂತಳು. “ಮ್ಯಾಮ್, ಇದನ್ನ ಒಬ್ಬ ಸ್ಕೂಲ್ ಹುಡ್ಗಿ ಹೇಳಿರ್ಬಹುದು. ಮತ್ತೆ, ಆ ಮಗು ಖಂಡಿತವಾಗಿಯೂ ಶ್ರೀಮಂತರ ಮನೆಯದ್ದೇ ಆಗಿರಬೇಕು ಮ್ಯಾಮ್. ಯಾಕಂದ್ರೆ ಬಡವರ ಮನೆ ಹುಡುಗಿ ಆಗಿದ್ರೆ ಅವ್ಳು ಊಟ ಚೆಲ್ತಾ ಇರ್ಲಿಲ್ಲ. ತಮ್ಮಂಗೋ ತಂಗಿಗೋ ತಗೊಂಡು ಹೋಗ್ತಾ ಇದ್ಲು. ಭಾಷಾ ಬಳಕೆಯ ವಿಷಯದಲ್ಲಿ ವಯಸ್ಸು, ಸಾಮಾಜಿಕ ಸಂದರ್ಭ ಇತ್ಯಾದಿಗಳ ಚರ್ಚೆ ಬೇಡುತ್ತಿದ್ದ ಆ ಪಾಠದ ಪ್ರಸ್ತುತ ಪ್ರಶ್ನೆಗೆ, `ಹೇಳಿದವಳು ಒಬ್ಬ ಶಾಲಾ ಬಾಲಕಿ, ತನ್ನ ಗೆಳತಿಗೆ ಅವಳು ಈ ಮಾತು ಹೇಳಿರಬಹುದು ಎಂಬ ಉತ್ತರವು, ಅಲ್ಲಿನ ಶೈಕ್ಷಣಿಕ ಅಗತ್ಯವನ್ನು ಪೂರೈಸುತ್ತಿತ್ತು. ಆದರೆ ಈ ವಿದ್ಯಾರ್ಥಿನಿಯು ಜೀವವನಾನುಭವದ ಹಿನ್ನೆಲೆಯಲ್ಲಿ ಈ ಉತ್ತರಕ್ಕೆ ನೀಡಿದ ಆರ್ಥಿಕ ಆಯಾಮವು ನನ್ನನ್ನು ಒಂದು ಕ್ಷಣ ದಂಗು ಬಡಿಸಿತು. ಹೌದಲ್ಲ, ಅವಳು ಹೇಳಿದ್ದು ನಿಜ. ಇದ್ದುಳ್ಳವರ ಮನೆಯ ಮಗು ಮಾತ್ರ ಹೀಗೆ ಅನ್ನವನ್ನು ಚೆಲ್ಲುವ ಮಾತಾಡಲು ಸಾಧ್ಯ. ಉತ್ತರ ಹೇಳಿದ ಆ ಹುಡುಗಿ ನಮ್ಮ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಓದುವ ಮಕ್ಕಳ ಹಾಗೂ ಅವರ ಪೋಷಕರ ಬದುಕಿನ ವಾಸ್ತವದ ಬಗೆಗೆ ಇದ್ದಕ್ಕಿದ್ದಂತೆ ಬೆಳಕು ಚಲ್ಲಿದಳು. ಹೀಗೆ ತರಗತಿಗಳಲ್ಲಿ ನಮ್ಮಂತಹ ಅಧ್ಯಾಪಕರಿಗೆ ಕಲಿಸುವುದಕ್ಕೆ ಮಾತ್ರ ಪಠ್ಯಭಾಗಗಳಿರುವುದಲ್ಲ, ನಾವು ಕಲಿಯಬೇಕಾದ ಜೀವನ ಪಾಠಗಳೂ ತುಂಬ ಇರುತ್ತವೆ.