ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಕನ್ನಡ ರತ್ನಕೋಶವು ಕನ್ನಡ ಭಾಷೆ ಮತ್ತು ಸಾಹಿತ್ಯಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ಮತ್ತು ಕಲಿಸುವ ಅಧ್ಯಾಪಕರಿಗೆ ತುಂಬ ಉಪಯುಕ್ತವಾದ ಕೃತಿ. ಅದರಲ್ಲಿ ನೂರಾರು ಕನ್ನಡ ಪದಗಳಿಗೆ ಅಕಾರಾದಿಯಲ್ಲಿ ಅರ್ಥಗಳಿರುವುದು ಮಾತ್ರವಲ್ಲ, ಕನ್ನಡ ನುಡಿಗಟ್ಟುಗಳು, ಸಂಖ್ಯಾಯುತ ವಿಷಯಪದಗಳಿಗೆ ವಿಸ್ತರಣೆಗಳು(ಉದಹರಣೆಗೆ ಪಂಚಲೋಹ, ಸಪ್ತರ್ಷಿ, ನವರತ್ನ ಇತ್ಯಾದಿ) ಅಳತೆಮಾನಗಳ ವಿವರಣೆಗಳು ……… ಹೀಗೆ ಅನೇಕ ಮಾಹಿತಿಗಳು ಇರುತ್ತವೆ. ಇಷ್ಟೆಲ್ಲ ವಿಷಯಗಳಿದ್ದರೂ ಆರಾಮವಾಗಿ ಕೈಯಲ್ಲಿ ಹಿಡಿದುಕೊಳ್ಳಬಲ್ಲಷ್ಟು ಹಗುರವಾದ, ಕಿರುಗಾತ್ರದ ಪುಸ್ತಕವಿದು. ಕಾಲು ಕೆ.ಜಿ. ಸಿಹಿತಿಂಡಿಯ ಡಬ್ಬಕ್ಕಿಂತ ಚಿಕ್ಕದು ಈ ಪುಸ್ತಕ. ಬೆಲೆಯೂ ಕಡಿಮೆ. 50-60 ರೂಪಾಯಿ ಅಷ್ಟೆ.

ರತ್ನಕೋಶಕ್ಕೂ ನನಗೂ ಒಂದು ಭಾವನಾತ್ಮಕವಾದ ನಂಟಿದೆ. ನಾನು ಮಂಗಳೂರಿನ ಬೈಕಂಪಾಡಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾಗ, ಆ ಶಾಲೆಂiÀiಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ನನ್ನ ತಾಯಿ(ಈಗ ದಿವಂಗತ) ಶ್ರೀಮತಿ ಯು.ಕೆ.ಚಿತ್ರಾವತಿಯವರ ಸಹೋದ್ಯೋಗಿಯೂ ನನ್ನ ತರಗತಿಯ ಕನ್ನಡ ಅಧ್ಯಾಪಕಿಯೂ ಆಗಿದ್ದ ಪಾರ್ವತಿ ಟೀಚರ್ ಒಮ್ಮೆ ನನಗೆ ರತ್ನಕೋಶವನ್ನು ಉಡುಗೊರೆಯಾಗಿ ಕೊಟ್ಟಿದ್ದರು, ಒಂದು ಕವನ ಬರೆದಿದ್ದೆನೆಂದು. ಈಗಲೂ ನನ್ನ ಬಳಿ ಆ ಪುಸ್ತಕ ಇದೆ. ತಂಪುಹೊತ್ತಿನಲ್ಲಿ ನೆನೆಯಬೇಕಾದ ಸುಮನಸ್ಸಿನ ವ್ಯಕ್ತಿ ನನ್ನ ಪಾರ್ವತಿ ಟೀಚರ್.

ತುಂಬ ಉಪಯುಕ್ತವಾದ ಈ ರತ್ನಕೋಶವು ನನ್ನ ವಿದ್ಯಾರ್ಥಿಗಳೆಲ್ಲರ ಬಳಿಯೂ ಇದ್ದರೆ ಅನುಕೂಲ ಎಂಬುದು ಕನ್ನಡ ಅಧ್ಯಾಪಕಿಯ ವೃತ್ತಿಯಲ್ಲಿರುವ ನನ್ನ ಭಾವನೆ. ತರಗತಿಯಲ್ಲಿ ಪ್ರತಿದಿನವೂ ಯಾವುದಾದರೂ ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯು ರತ್ನಕೋಶದಿಂದ ಒಂದು ಹೊಸ ಪದ ಮತ್ತು ಅದರ ಅರ್ಥಗಳನ್ನು ಕರಿಹಲಗೆಯ ಮೇಲೆ ಬರೆಯುವುದು, ಹಾಗೂ ಉಳಿದ ಮಕ್ಕಳು ಅದನ್ನು ತಮ್ಮ ಟಿಪ್ಪಣಿ ಪುಸ್ತಕಗಳಲ್ಲಿ ಬರೆದುಕೊಳ್ಳುವುದು ನನ್ನ ತರಗತಿಗಳಲ್ಲಿ ಚಾಲ್ತಿಯಲ್ಲಿರುವ ಅಭ್ಯಾಸವಾಗಿದೆ. ಈ ಸಂಬಂಧ ಅವರು ರತ್ನಕೋಶವನ್ನು ಕೊಂಡುಕೊಳ್ಳಲಿ ಎಂಬ ದೃಷ್ಟಿಯಿಂದ “ನೀವು ಕನ್ನಡ ರತ್ನಕೋಶವನ್ನು ಖಂಡಿತಾ ಕೊಂಡ್ಕೋಬೇಕು ಮಕ್ಕಳೇ. ನೀವು ಒಮ್ಮೆ ಪಾನಿಪುರಿ ತಿನ್ನುವುದಕ್ಕಿಂತ ಕಡಿಮೆ ಖರ್ಚು ಇದಕ್ಕೆ, ಆದರೆ ಇದರ ಪ್ರಯೋಜನ ನಿಮಗೆ ಶಾಶ್ವತವಾದದ್ದು’’ ಎಂದು ಹೇಳುತ್ತೇನೆ. ಪಾಪ, ಮಕ್ಕಳಲ್ಲಿ ಬಹುತೇಕರು (ಕೆಲವರು ನನ್ನ ಬಲವಂತಕ್ಕೆ ಅನ್ನಿ!) ಇದನ್ನು ಕೊಂಡು ಪದಗಳನ್ನು ಓದಿ, ಬರೆದು ಕಲಿಯುತ್ತಾರೆ. ಅದನ್ನು ನೋಡುವಾಗೆಲ್ಲ ನನಗೆ ನನ್ನ ಪಾರ್ವತಿ ಟೀಚರ್ ನೆನಪಾಗುತ್ತಾರೆ.