ಕೆಲವು ಸಲ ಕನ್ನಡ ಅಧ್ಯಾಪಕರನ್ನು ಬಂಧುಮಿತ್ರರು ತಮ್ಮ ಮಕ್ಕಳಿಗೆ, ಅಥವಾ ಹೊಸದಾಗಿ ಕಟ್ಟಿದ ಮನೆಗೆ ಹೆಸರು ಸೂಚಿಸಲು ಕೇಳುವುದುಂಟು. `ಮಗುವಿನ ಜಾತಕದಲ್ಲಿ ಇಂತಹ ಅಕ್ಷರ ಬಂದಿದೆ, ಯಾವುದಾದರೂ ಚೆನ್ನಾಗಿರೋ ಹೆಸರು ಹೇಳಿ ಅಂತ ಕೇಳುವುದು, ಕನ್ನಡ ಅಧ್ಯಾಪಕರು ತಮಗೆ ತಿಳಿದ ಮೂಲಗಳಿಂದ ಹೆಸರುಗಳನ್ನು ಹುಡುಕಿ ಕೊಡುವುದು ಇವು ಸಾಮಾನ್ಯವಾಗಿ ನಡೆಯುವ ವಿದ್ಯಮಾನಗಳು. ಇನ್ನು ಕೆಲವು ಸಲ ಕನ್ನಡ ವಿಭಾಗಕ್ಕೆ ಬಂದವರು ತಮ್ಮ ಮನೆಯಲ್ಲಿ ಎಳೆ ಮಗು ಇದೆ ಅಂದಾಗ ಅಥವಾ ಈಗ ತಾನೇ ಮಗುವಿನ ನಾಮಕರಣ ಆಯಿತು ಅಂದಾಗ, ಸಹಜವಾಗಿ, `ಮಗುವಿಗೆ ಏನು ಹೆಸರಿಟ್ರಿ? ಎಂದು ಕೇಳಿ ಆ ಹೆಸರಿನ ಅರ್ಥದ ಬಗ್ಗೆ ಯೋಚಿಸುವ ಕೆಲಸವನ್ನು ಕನ್ನಡ ಅಧ್ಯಾಪಕರ ಮನಸ್ಸು ಮಾಡುತ್ತಿರುತ್ತೆ. ಹೇಳಿಕೇಳಿ ನಾವು `ಕನ್ನಡ ಮೇಷ್ಟ್ರುಗಳು ಶಬ್ದಾರ್ಥಪ್ರಿಯರಲ್ಲವೇ? ಈ ಹಿನ್ನೆಲೆಯಲ್ಲಿ, ಒಂದು ಸಲ ನಾನು ಕೆಲಸ ಮಾಡುತ್ತಿದ್ದ ಕಾಲೇಜೊಂದರ ಕನ್ನಡ ವಿಭಾಗದಲ್ಲಿ ವಿಚಿತ್ರ ಸನ್ನಿವೇಶವೊಂದು ಎದುರಾದದ್ದನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಕೆಲವು ವರ್ಷಗಳ ಹಿಂದೆ ನಮ್ಮ ಸಹೋದ್ಯೋಗಿಯೊಬ್ಬರ ಕಾರಿನ ಚಾಲಕರು ಒಮ್ಮೆ ನಮ್ಮ ವಿಭಾಗಕ್ಕೆ ಬಂದಿದ್ದರು. ಹೀಗೇ ಲೋಕಾಭಿರಾಮದ ಮಾತುಗಳನ್ನಾಡುತ್ತಿರುವಾಗ, ಆತ ಮೂರು ತಿಂಗಳ ಹೆಣ್ಣು ಮಗುವಿನ ತಂದೆ ಎಂಬ ವಿಷಯ ತಿಳಿದುಬಂತು. ಪದಕುತೂಹಲಿಯಾದ ನಾನು ಸಹಜವಾಗಿ ಅವರನ್ನು ಕೇಳಿದೆ – `ಮಗೂಗೆ ಏನು ಹೆಸರಿಟ್ಟಿದೀರಿ?. ಆತ “ಮಗುವಿನ್ ಹೆಸ್ರು ಗಣಿಕಾ ಅಂತ ಇಟ್ಟಿದೀವಿ ಮೇಡಂ, ಚೆನ್ನಾಗಿದ್ಯಾ? ಅಂದರು. ನನಗೆ ಒಂದು ಕ್ಷಣ ಏನು ಹೇಳಬೇಕೋ ತಿಳಿಂiiದಾಯಿತು.
ಏಕೆಂದರೆ ಕನ್ನಡದಲ್ಲಿ ಗಣಿಕಾ ಎಂಬ ಪದಕ್ಕೆ ಇರುವ ಬೇರೆ ಬೇರೆ ಅರ್ಥಗಳ ಜೊತೆ ವೇಶ್ಯೆ, ಸೂಳೆ ಎಂಬ ಅರ್ಥವೂ ಇದೆ. ಪಾಪ, ಇದು ತಿಳಿಯದೆ ಆತ ಮಗುವಿಗೆ ಈ ಹೆಸರಿಟ್ಟಿರಬೇಕು!
ಪ್ರಗಲ್ಭ್, ಸಂಘರ್ಷ್, ಚರಿಷ್ಯ, ಪ್ರೇಕ್ಷಿತ. ಆಶ್ರಿಕಾ. ಚಾರುಣ್ಯ, ವಿರಿತಾ, ಲಿತಿಕಾ ….. ಓಹ್ ಜಾತಕದಲ್ಲಿ ಬಂದ ಮೊದಲಕ್ಷರ ಹಿಡಿದು ಏನೆಲ್ಲ ಹೆಸರು ಇಡುವುದನ್ನು ನೋಡುತ್ತೇವೆ. ಕರೆಯಲು ತೀರಾ ಕಷ್ಟವಾದ ಹೆಸರುಗಳು, ನೇತ್ಯಾತ್ಮಕ ಅರ್ಥವುಳ್ಳ, ಕೆಲವೊಮ್ಮೆ ಭಯಂಕರ ಅರ್ಥ ಕೊಡುವ ಹೆಸರುಗಳು, ಅಯ್ಯೋ ಹೇಗೆ ಹೇಳುವುದು ಕಾರ್ಯಕಾರಣ ಸಂಬಂಧವಿರದ ಈ ನೂತನ ನಾಮಕರಣೋತ್ಸಾಹದ ಪರಿತಾಪವನ್ನು!! `ಗೂಗಲ್ನಲ್ಲಿ ಅರ್ಥ ನೋಡೇ ಇಟ್ವಿ ಮೇಡಂ ಎಂಬ ವಿವರಣೆಯನ್ನು ಕೂಡ ಅನೇಕ ಬಾರಿ ಕೊಡಲಾಗುತ್ತೆ! ಕೆಲವು ಸಲ ಗೂಗಲ್ ಅನುವಾದಗಳಲ್ಲಿ ತಪ್ಪುಗಳು ಕಂಡುಬರುವ ಸಾಧ್ಯತೆ ಇರುವುದರಿಂದ ಹೆಸರಿನ ಅರ್ಥದ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.
ಕೊನೆಗೆ, ನಮ್ಮ ವಿಭಾಗಕ್ಕೆ ಬಂದಿದ್ದ ಚಾಲಕರು ಅಂದರೆ ಆ ನೂತನ ತಂದೆಗೆ ನಾವು ಕನ್ನಡ ಅಧ್ಯಾಪಕರು, ಗಣಿಕಾ ಪದಕ್ಕಿರುವ ಅರ್ಥವನ್ನು ತಿಳಿಸಿಕೊಟ್ಟು, ಆ ಮಗುವಿನ ಹೆಸರನ್ನು ಬದಲಾಯಿಸುವುದು ಉತ್ತಮ ಎಂದು ಸಲಹೆ ಕೊಟ್ಟೆವು. ಕೆಲ ದಿನಗಳ ನಂತರ ಗಣಿಕಾ ಎಂಬ ಹೆಸರಿಟ್ಟಿದ್ದ ಮಗುವಿನ ಹೆಸರನ್ನು ಗೌರಿ ಎಂದು ಬದಲಾಯಿಸಿದರು ಎಂದು ತಿಳಿದು ಬಂತು.
								
 Like us!
 Follow us!