ಹೈಪರ್ ಬೋಲಾ – ಅತಿ ಪರವಲಯ – ತನ್ನ ವಿಕೇಂದ್ರಿಕತೆಯು ( eccentricity) ಒಂದಕ್ಕಿಂತ ಹೆಚ್ಚು ಇರುವಂತಹ ಶಂಕು.
ಹೈಪರ್ ಬಾಲಿಕ್ ಫಂಕ್ಷನ್ಸ್ – ಪರವಲಯಿತ ಗಣಿತವಾಕ್ಯಗಳು – Sin h, cos h ಮತ್ತು tan h – ಇವನ್ನೊಳಗೊಂಡ ಗಣಿತವಾಕ್ಯಗಳ ಕಟ್ಟು. ಇವು ತ್ರಿಕೋನಮಿತಿ ( ಟ್ರಿಗೋನೋಮೆಟ್ರಿ)ಯ ಗಣಿತವಾಕ್ಯಗಳಿಗೆ ಸಮನಾದ ಗುಣಲಕ್ಷಣಗಳನ್ನೇ ಹೊಂದಿರುತ್ತವೆ.
ಹೈಪರ್ – ಅತಿ, ಎತ್ತರದ, ಹೆಚ್ಚಿನ, ಅತೀತ – ಅತಿ, ಎತ್ತರದ, ಹೆಚ್ಚಿನ – ಈ ಅರ್ಥವುಳ್ಳ ಇಂಗ್ಲಿಷ್ ಪೂರ್ವಪದ ಇದು. ಉದಾಹರಣೆಗೆ, hypersonic ಅಂದರೆ ಅತಿಶಬ್ದದ, ಶಬ್ದಾತೀತ.
ಹೈಡ್ರೋಸ್ಟ್ಯಾಟಿಕ್ಸ್ – ವಿಶ್ರಾಂತ ದ್ರವಸ್ಥಿತಿ ವಿಜ್ಞಾನ – ವಿಶ್ರಾಂತಸ್ಥಿತಿಯಲ್ಲಿರುವ ದ್ರವಗಳ ಮುಖ್ಯವಾಗಿ ಕೆರೆಗಳು, ಅಣೆಕಟ್ಟುಗಳು, ದ್ರವತಡೆಗೋಡೆಗಳು ಮತ್ತು ಜಲ ಒತ್ತು ಯಂತ್ರಗಳಲ್ಲಿನ ದ್ರವಗಳ ಅಧ್ಯಯನ.
ಹೈಗ್ರೋಸ್ಕೋಪ್ – ತೇವಾಂಶ ದರ್ಶಕ – ವಾಯುವಿನಲ್ಲಿನ ಸಾಪೇಕ್ಷ ( ತುಲನೀಯ) ತೇವಾಂಶವನ್ನು ಸೂಚಿಸುವ ಉಪಕರಣ. ಇದರಲ್ಲಿ ಸಾಮಾನ್ಯವಾಗಿ ತೇವಾಂಶದ ಉಪಸ್ಥಿತಿಯಲ್ಲಿ ತನ್ನ ಬಣ್ಣವನ್ನು ಬದಲಾಯಿಸುವ ವಸ್ತುವನ್ನು ಬಳಸುತ್ತಾರೆ.
ಹೈಗ್ರೋಮೀಟರ್ – ತೇವಾಂಶ ಮಾಪಕ – ವಾತಾವರಣದಲ್ಲಿರುವ ತೇವಾಂಶವನ್ನು ಅಳೆಯುವಂತಹ ಉಪಕರಣ. ಇದರಲ್ಲಿ ವಿವಿಧ ಬಗೆಗಳಿವೆ. ಯಾಂತ್ರಿಕ, ವಿದ್ಯುತ್ ಬಳಕೆಯ, ಇಬ್ಬನಿ ಬಳಕೆಯ, ತೇವ ಮತ್ತು ಒಣ ಬುರುಡೆಯ …ಹೀಗೆ.
ಹೈಡ್ರೋಮ್ಯಾಗ್ನೆಟಿಕ್ಸ್ – ಜಲಕಾಂತತ್ವ – ವಾಹಕವಾಗಿರುವ ಒಂದು ದ್ರಾವಣವನ್ನು ಏಕಕಾಲದಲ್ಲಿ ವಿದ್ಯುತ್ ಕಾಂತೀಯತೆ ಮತ್ತು ಜಲಚಲನಾ ನಿಯಮಗಳಡಿಯಲ್ಲಿ ಬರುವಂತೆ ಮಾಡಿದಾಗ ಅದರ ಅಧ್ಯಯನ ಮಾಡುವುದು. ಇದನ್ನು ಕಾಂತೀಯ ಜಲಚಲನಾ ಶಾಸ್ತ್ರ ( MHD – Magneto hydrodynamics) ಎಂದೂ ಕರೆಯುತ್ತಾರೆ.
ಹೈಡ್ರೋಮೀಟರ್ – ಜಲಸಾಂದ್ರತಾ ಮಾಪಕ – ದ್ರವಗಳ ಸಾಂದ್ರತೆಯನ್ನು ಅಥವಾ ಸಾಪೇಕ್ಷ (ತುಲನೀಯ) ಸಾಂದ್ರತೆಯನ್ನು ಅಳೆಯಲು ಬಳಸುವ ಉಪಕರಣ.