ಮೌಖಿಕ ಸಾಹಿತ್ಯವೂ ಸೇರಿದಂತೆ ಕನ್ನಡ ಸಾಹಿತ್ಯದ ಸುದೀರ್ಘ ಚರಿತ್ರೆಯನ್ನು ಗಮನಿಸಿದಾಗ ಎದ್ದು ಕಾಣುವ ಒಂದು ಅಂಶವೆಂದರೆ, ಸಾಹಿತ್ಯಕ್ಕೂ ಸಂಗೀತಕ್ಕೂ ಇರುವ ಆಳವಾದ ಸಂಬಂಧ. ಆಧುನಿಕ ಕಾಲದಲ್ಲಿ ನವ್ಯ ಸಾಹಿತ್ಯದ ಘಟ್ಟವೊಂದನ್ನು ಹೊರತು ಪಡಿಸಿದರೆ ಉಳಿದೆಲ್ಲ ಘಟ್ಟಗಳಲ್ಲೂ ಸಂಗೀತದೊಂದಿಗೆ ಸಾಹಿತ್ಯದ ಸಂಬಂಧ ಗಟ್ಟಿಯಾಗಿರುವುದು ನಮ್ಮ ಅರಿವಿಗೆ ಬರುತ್ತದೆ. ಗರತಿಯ ಹಾಡುಗಳ ತ್ರಿಪದಿಯ ಧಾಟಿ, ‘ಮಾದೇಶ್ವರ ಪುರಾಣ’, ‘ಮಂಟೇಸಾಮಿ ಕಥೆ’ಗಳ (ಜನಪದ ಪುರಾಣಗಳು) ಹಾಡಿನ ಮಟ್ಟುಗಳು, ಹಿಂದೆ ಗದುಗಿನ ಭಾರತ, ಜೈಮಿನಿ ಭಾರತ ಮುಂತಾದವುಗಳನ್ನು ಗಮಕಶೈಲಿಯಲ್ಲಿ ಹಾಡುತ್ತಿದ್ದುದು, ವಚನ ಗಾಯನ, ಹರಿದಾಸರ ಕೀರ್ತನೆಗಳ ಗಾಯನ, ಮಕ್ಕಳ ಪದ್ಯಗಳು, ಭಾವಗೀತೆ, ಹೋರಾಟದ ಹಾಡುಗಳು, ಚಿತ್ರಗೀತೆಗಳು…ಹೀಗೆ ಬರಹ ಮತ್ತು ಗೀತೆಗಳ ಆಪ್ತ ಸಂಬಂಧ ಗಮನೀಯವಾಗಿದೆ. ಜನಸಾಮಾನ್ಯರಿಗೆ (ಸಾಹಿತ್ಯ ಕ್ಷೇತ್ರದಿಂದ ಆಚೆ ಇರುವವರಿಗೆ ಎಂದು ಅರ್ಥ) ಸಾಹಿತ್ಯವನ್ನು ತಲುಪಿಸುವಲ್ಲಿ ಸಂಗೀತದ ಪಾತ್ರ ದೊಡ್ಡದು.
ಈಗಲೂ ಸಹ ಮಕ್ಕಳಲ್ಲಿ, ಮತ್ತು ಯುವಜನತೆಯಲ್ಲಿ ಕನ್ನಡದ ಬಗ್ಗೆ ಪ್ರೀತಿ ಮೂಡಿಸುವಲ್ಲಿ ಸಂಗೀತವು ಪರಿಣಾಮಕಾರಿಯಾದ ಉಪಕರಣವಾಗಬಲ್ಲುದು. ಈ ಕುರಿತು ನಾವು ಹೆಚ್ಚು ಆಲೋಚನೆ ಮಾಡಬೇಕಿದೆ ಅನ್ನಿಸುತ್ತೆ.