ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮತ್ತು ಕನ್ನಡಿಗರ ಜೀವನಕ್ರಮವನ್ನು ತುಸು ಆಳವಾಗಿ ಗಮನಿಸಿದ ಯಾರಿಗೇ ಆದರೂ ಒಂದು ಸಂಗತಿ ಗಮನಕ್ಕೆ ಬಂದಿರುತ್ತದೆ. ಅದೇನೆಂದರೆ ಸಂಗೀತವು ಸಾಹಿತ್ಯವನ್ನು ಜನರಿಗೆ ಮುಟ್ಟಿಸುವ ಸೇತುವೆಯಾಗಿ ಕೆಲಸ ಮಾಡಿದೆ. ಈ ಮಾತು ಅನಕ್ಷರಸ್ಥ ಸಮುದಾಯದ ಮಟ್ಟಿಗಂತೂ  ಹೆಚ್ಚು ನಿಜ.

ಮೊದಲಿಗೆ ಕನ್ನಡ ಸಾಹಿತ್ಯದ ತಾಯಿಬೇರಾದ ನಮ್ಮ ಜನಪದ ಸಾಹಿತ್ಯವನ್ನು ನೋಡುವುದಾದರೆ, ಅಲ್ಲಂತೂ ಹಾಡಿನ ಧಾಟಿಯು ಮಾತಿಗಿಂತ ಮೊದಲೇ ಅಥವಾ ಮಾತಿನೊಟ್ಟಿಗೆ ಬಂತೇನೋ ಎಂಬಂತೆ, ಗಳಸ್ಯ ಕಂಠಸ್ಯವಾಗಿ ಬಾಯಿಂದ ಬಾಯಿಗೆ ಧಾಟಿ ಸಮೇತ ಸಾಹಿತ್ಯ ಹರಿದುಬಂದಿದೆ.

ಹಾಡಿಕೊಂಡು ದಾರಿಯ ಮೇಲೆ ಸಾಗುತ್ತಾ, ದೇವಸ್ಥಾನದ ಜಗಲಿಗಳಲ್ಲಿ, ಅರಳಿ ಕಟ್ಟೆಗಳಲ್ಲಿ, ಮಠಗಳ ಅಂಗಳಗಳಲ್ಲಿ ಹಾಡುತ್ತಾ, ಹಾಡಿಸುತ್ತಾ ಜನರ ಗಮನವನ್ನು ಸಾಹಿತ್ಯದ ಹಾಗೂ ಬದುಕಿನ ಅರ್ಥದ ಕಡೆ ಸೆಳೆದ ಹರಿಕಥಾ ದಾಸರು, ತತ್ವಪದಕಾರರು, ಜೋಗಿ ಜಂಗಮರೇ, ದಾಸಯ್ಯಗಳು ಮುಂತಾದವರನ್ನು ನಾವು ಮರೆಯಲಾಗದು. 

ನಡುಗನ್ನಡದ ಲಿಖಿತ ಸಾಹಿತ್ಯವನ್ನು ಗಮಕದ ಹಾಡುಗಾರಿಕೆ (  ಕರ್ನಾಟಕ ಸಂಗೀತದ  ಶಾಸ್ತ್ರೀಯ ರಾಗಗಳಲ್ಲಿ ಕಾವ್ಯಗಳನ್ನು ಹಾಡುವ ಒಂದು ರೀತಿ)ಯು ಜನರಿಗೆ ತಲುಪಿಸಿದರೆ, ಹರಿದಾಸರು, ತತ್ವಪದಕಾರರು, ಆಧುನಿಕಪೂರ್ವ ಕಾಲದ ಕೀರ್ತನೆ, ತತ್ವಪದಗಳು ಜನರ ಬಾಯಿಯಲ್ಲಿ ನಲಿಯುವಂತೆ ಮಾಡಿದರು. 

ಇನ್ನು ಆಧುನಿಕ ಕಾಲಕ್ಕೆ ಬಂದರೆ ಭಾವಗೀತೆಗಳು  ಕಟ್ಟಿದ ಸಾಮ್ರಾಜ್ಯದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಬಿ ಎಂ ಶ್ರೀ, ಕುವೆಂಪು, ಬೇಂದ್ರೆ, ಕೆ ಎಸ್ ನ, ನಿಸಾರ್ ಅಹಮದ್ ಮುಂತಾದ ಅಕ್ಷರ ಶಿಲ್ಪಿಗಳನ್ನು ಜನಸಾಮಾನ್ಯರ ಬಳಿ ಕೊಂಡೊಯ್ದದ್ದು ಈ ಭಾವಗೀತೆಗಳೇ ಅಲ್ಲವೇ?

ಬಂಡಾಯ, ದಲಿತ ಸಾಹಿತ್ಯದ ಸಂದರ್ಭದಲ್ಲೂ ಹೋರಾಟದ ಹಾಡುಗಳು ಬರೆವವರಿಗೂ, ಜನರಿಗೂ ಸೇತುವೆ ಆದವು.  

ಇನ್ನು ಸಿನಿಮಾ ಹಾಡುಗಳಂತೂ ಜನರ ಹೃದಯಕ್ಕೆ  ಬಹು ಹತ್ತಿರವಾಗಿ ತಮ್ಮದೇ ರೀತಿಯಲ್ಲಿ  ತುಸು ಮನರಂಜನೆ, ನಸು ವ್ಯಾಪಾರದ ದಾರಿಯಲ್ಲಿ ಸಾಗುತ್ತಾ, ಕೆಲವು ಸಲ ವಿಮರ್ಶಕರ ಅಸಮಾಧಾನ, ಕೋಪಗಳಿಗೆ ಒಳಗಾದರೂ ಸಾಹಿತ್ಯವನ್ನು ಜನರಿಗೆ ಮುಟ್ಟಿಸಿವೆ, ಮುಟ್ಟಿಸುತ್ತಲೇ ಇವೆ.

ಕನ್ನಡ  ಸಾಹಿತ್ಯದ ಸೇತುವೆಯಾದ ಸಂಗೀತವೇ ನಿನಗೊಂದು ನಮಸ್ಕಾರ.