ಪದವಿ ಕಾಲೇಜುಗಳಲ್ಲಿ ಸುಮಾರು 2004 ನೇ ಇಸವಿಯವರೆಗೂ ವಾರ್ಷಿಕ ಪದ್ಧತಿಯ ಶೈಕ್ಷಣಿಕ ವಿನ್ಯಾಸ ಇತ್ತು.‌ ಆಗ ಕವಿತೆಗಳು/ಸಣ್ಣಕಥೆಗಳು/ಪ್ರಬಂಧಗಳು ಮುಂತಾದವನ್ನು ಪಾಠ ಮಾಡುವ ಮುಂಚೆ ಅಥವಾ ವರ್ಷದ ಪ್ರಾರಂಭದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಾವಧಾನವಾಗಿ ವಿವರಿಸುವ ಅವಕಾಶ ಇತ್ತು.  ಏಕೆಂದರೆ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಒಂದೇ ಸಲ ವಾರ್ಷಿಕ ಪರೀಕ್ಷೆ ಇರುತ್ತಿತ್ತು. ಆದರೆ  ಅರ್ಧವಾರ್ಷಿಕ ಪಾಠ ಪದ್ಧತಿ ಬಂದ ಮೇಲೆ ಈ ಚಿತ್ರ ಬದಲಾಯಿತು.‌‌ ಪಾಠಕ್ಕೆ ಸಮಯ ಕಡಿಮೆ ಆಗಿ ಪರೀಕ್ಷೆಗೆ ಮಹತ್ವ ಹೆಚ್ಚಾಯಿತು.‌ ಪರೀಕ್ಷೆ ಬರುವಷ್ಟರಲ್ಲಿ ಪಠ್ಯಭಾಗ ಮುಗಿಸುವುದೇ ದೊಡ್ಡ ಸವಾಲಾಗಿಬಿಟ್ಟಿತು. ಈ ಬೆಳವಣಿಗೆಯಿಂದ ದೊಡ್ಡ ಹೊಡೆತ ಬಿದ್ದದ್ದು ಅಂದರೆ ಸಾಹಿತ್ಯ ಚರಿತ್ರೆಯ ಪರಿಚಯಕ್ಕೆ. ನಿಧಾನವಾಗಿ, ಆರಾಮವಾಗಿ ಸಾಹಿತ್ಯ ಚರಿತ್ರೆಯ ಪರಿಚಯ ಮಾಡಿ ಕೊಡುವಷ್ಟು ಸಮಯ ಸಿಗದೆ ಬಹಳ ಚುರುಕಾಗಿ, ಚುಟುಕಾಗಿ ಸಾಹಿತ್ಯ ಚರಿತ್ರಯ ಪರಿಚಯ ಮಾಡಿಕೊಡುವ ಸನ್ನಿವೇಶ ಬಂದಿದೆ. ಇದು ಪದವಿ ಹಂತದ  ಎಲ್ಲ  ಭಾಷಾ ಕನ್ನಡ ( ಐಚ್ಛಿಕ ಕನ್ನಡ ಅಲ್ಲ) ಅಧ್ಯಾಪಕರನ್ನು ಸಹ ಕಾಡುವಂತಹ ಸಮಸ್ಯೆಯಾಗಿದೆ.