ಅಧ್ಯಾಪಕರ ಉದ್ಯೋಗದಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಎಂಬುದು ತುಂಬ ಗಂಭೀರ ವಿಷಯ ಹಾಗೂ ಅತ್ಯಂತ ಜವಾಬ್ದಾರಿಯುತವಾಗಿ ಮಾಡಬೇಕಾದ ಕೆಲಸ.‌ ಆದಾಗ್ಯೂ ಕೆಲವೊಮ್ಮೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬರೆಯವ ಉತ್ತರಗಳು, ಮಾಡುವ ತಪ್ಪುಗಳು ಮೌಲ್ಯಮಾಪಕರಿಗೆ ನಗೆಯುಕ್ಕಿಸಿ ಅವರ ಮನಸ್ಸನ್ನು ತುಸು ತಿಳಿಗೊಳಿಸುವುದು ಸುಳ್ಳಲ್ಲ. ಅಂತಹದೇ ಒಂದು ಪ್ರಸಂಗ ಈ ಅಧ್ಯಾಪಕಿಗೂ ಎದುರಾಯಿತು. 

ಇಂಗ್ಲಿಷ್ ಮತ್ತು ಕನ್ನಡದ ಬಳಕೆಯನ್ನು ಕುರಿತು ಬರೆಯಬೇಕಾಗಿದ್ದ ಒಂದು ಉತ್ತರದಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ” ನಮ್ಮ ಎಮ್ಮೆಯ ಕನ್ನಡ ಭಾಷೆಯು ತುಂಬ ಪ್ರಾಚೀನವಾದುದು” ಎಂದು ಬರೆದಿದ್ದಳು‌! ಅವಳ ಈ ವಾಕ್ಯವನ್ನು ಪದಶಃ ಓದಿದರೆ ಎಮ್ಮೆ ಎಂಬ ಪ್ರಾಣಿಗೆ ಬರುವ ಕನ್ನಡವು ತುಂಬ ಪ್ರಾಚೀನವಾದುದು ಎಂಬ ಅರ್ಥ ಬರುತ್ತದೆ. ಆದರೆ ಅವಳು ಉತ್ತರ ಬರೆಯುತ್ತಿದ್ದ ಪಾಠದ ಸಂದರ್ಭ, ಸನ್ನಿವೇಶಗಳನ್ನು ಗಮನಿಸಿದರೆ ಆ ವಾಕ್ಯವು ” ನಮ್ಮ ಹೆಮ್ಮೆಯ ಕನ್ನಡ ಭಾಷೆಯು ತುಂಬ ಪ್ರಾಚೀನವಾದುದು” ಎಂದಾಗಬೇಕಿತ್ತು! ಅಂತೂ ವಿದ್ಯಾರ್ಥಿಗಳು ಮಾಡುವ ಅಕಾರ-ಹಕಾರ ದೋಷಗಳು ನಗೆಯುಕ್ಕಿಸುತ್ತವೆ ಮತ್ತು ಈ  ಅಕ್ಷರ ದೋಷದ ಮೂಲ ಎಲ್ಲಿ? ಮತ್ತು ಇದನ್ನು  ಪರಿಹರಿಸುವುದು ಹೇಗೆ? ಎಂಬ ಚಿಂತೆಯನ್ನು  ಸಹ ಅಧ್ಯಾಪಕರಲ್ಲಿ‌ ಹುಟ್ಟಿಸುತ್ತವೆ.