ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಿಂದ ರಾಜಾಜಿನಗರದ ಪ್ರವೇಶದ್ವಾರ (ಎಂಟ್ರೆನ್ಸ್)ಕ್ಕೆ ಹೋಗುವ ರಸ್ತೆಯಲ್ಲಿ ಒಂದು ಪೆಟ್ರೋಲ್ ಬಂಕ್ ಇದೆ. ಒಂದು ಬೆಳಿಗ್ಗೆ ನಾನು ಹೊಂಡಾ ಆಕ್ಟಿವಾ ಎಂಬ ನಾಮಧೇಯದ ನನ್ನ ದ್ವಿಚಕ್ರ ರಥದ ಹೊಟ್ಟೆ ತುಂಬಿಸಲು ಅಲ್ಲಿಗೆ ಹೋಗಿದ್ದೆ. ಸಾಲಲ್ಲಿ ನಿಂತಿದ್ದವಳು ನನ್ನ ಸರದಿ ಬಂದಾಗ ಪೆಟ್ರೋಲು ಹಾಕುವ ಹುಡುಗನಿಗೆ `ಪೂರ್ತಿ ಟ್ಯಾಂಕ್ ಹಾಕಪ್ಪ’ ಎಂದೆ. ಅವನು “ಓ, ಸಂಪೂರ್ಣಾನ? ಶೂನ್ಯ ನೋಡಿ’’ ಅಂದ. ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಸಾಮಾನ್ಯವಾಗಿ ಪೆಟ್ರೋಲು ಕೇಂದ್ರಗಳಲ್ಲಿ “ಓ, ಫುಲ್ ಟ್ಯಾಂಕಾ? ಝೀರೋ ನೋಡಿ’’ ಎಂದು ಬಳಸುವ ಮಾತಿಗೆ ಬದಲಾಗಿ ಈ ಹುಡುಗ ಬಳಸಿದ ಕನ್ನಡ ಪದಗಳು ಅವು. ಅವನ ಬಗ್ಗೆ ವಿಚಾರಿಸಿದೆ. ಚಾಮರಾಜ ನಗರದ ಕಡೆಯ ಹುಡುಗನಂತೆ. ಪಿಯುಸಿ ಮುಗಿಸಿದ್ದು ಕೆಲಸಕ್ಕಾಗಿ ಬೆಂಗಳೂರಿನಲ್ಲಿರುವ ಹುಡುಗ ಅವನು. “ನಂಗೆ ಕನ್ನಡ ಅಂದ್ರೆ ತುಂಬ ಇಷ್ಟ ಮೇಡಂ’’ ಅಂದ. ಅವನ ಮುಗ್ಧ ಉತ್ಸಾಹ, ಕನ್ನಡ ಪ್ರೀತಿ ನೋಡಿ ನನಗೆ ಮನಸ್ಸು ತುಂಬಿ ಬಂತು. ನಮ್ಮ ನಾಡವರ ಕನ್ನಡಾಭಿಮಾನ ಎಷ್ಟೆಲ್ಲ ರೀತಿಗಳಲ್ಲಿ ಕೆಲವೊಮ್ಮೆ ಅನೂಹ್ಯ ಸ್ಥಳಗಳಲ್ಲೂ ವ್ಯಕ್ತವಾಗುತ್ತಲ್ಲ ಅನ್ನಿಸಿತು. ಖುಷಿಯಾಯಿತು.