ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನೀರ್ ಎಂಬ ಧಾತುವಿನಿಂದ (ಪದಮೂಲ) ಪ್ರಾರಂಭವಾಗುವ ತಿಂಡಿ/ಖಾದ್ಯಗಳ ಹೆಸರು ಕೇಳಿ ಬರುತ್ತವೆ. ತಮಾಷೆಯೆಂದರೆ ಎಂದೂ ಆ ಹೆಸರು ಕೇಳದ ಪ್ರದೇಶದವರು “ಹಾಂ…!? ಹೀಗೂ ಒಂದು ತಿಂಡಿ ಇರುತ್ತಾ!? ” ಎಂದು ಆಶ್ಚರ್ಯ ಪಡುತ್ತಾರೆ, ಆದರೆ ತಮ್ಮ ಪ್ರದೇಶದಲ್ಲಿ ಇರುವ ನೀರ್ ಎಂಬ ಪದಮೂಲದ ಹೆಸರಿನ ತಿಂಡಿಯ ಬಗೆಗೆ ಅವರಿಗೆ ಅಚ್ಚರಿಯ ಭಾವ ಇರುವುದಿಲ್ಲ; ಏಕೆಂದರೆ ಅದು ಅವರಿಗೆ ರೂಢಿಯಾಗಿಬಿಟ್ಟಿರುತ್ತದೆ. ದಕ್ಷಿಣ ಕನ್ನಡದ ಕಡೆ ಅಕ್ಕಿ ನೆನೆ ಹಾಕಿ ಅದನ್ನು ಉಪ್ಪಿನೊಡನೆ ನುಣ್ಣಗೆ ರುಬ್ಬಿ ಮಾಡುವ ಮೃದು ಮೃದು ನೀರು ದೋಸೆ ಇದೆ. ಮಲೆನಾಡಿನ ಕಡೆ ತೆಂಗಿನಕಾಯಿ, ಮತ್ತು ಒಂದೋ ಎರಡೋ ಹಸಿಮೆಣಸು, ಜೊತೆಗೆ ತುಸುವೇ ಶುಂಠಿ ಹಾಕಿ ಮಾಡುವ ಬಿಳಿ ಬಿಳಿ ನೀರು ಚಟ್ನಿ ಇದೆ. ಇನ್ನು ಮೈಸೂರು ಕಡೆ ಚಪಾತಿಗೆ/ದೋಸೆಗೆ ಗಟ್ಟಿಯಾಗಿ ಮಾಡುವ ಆಲೂಗಡ್ಡೆ-ಈರುಳ್ಳಿ ಪಲ್ಯವನ್ನು ಒಂದಷ್ಟು ನೀರು ಬೆರೆಸಿ, ಬೇಯಿಸಿ ಪೂರಿಗೆ ನೆಂಚಿಕೊಳ್ಳಲು ‘ನೀರ್ ಪಲ್ಯ’ ಎಂದು ಮಾಡುತ್ತಾರೆ. ಅಂದ ಹಾಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ, ಕರಾವಳಿಯ ಕೆಲವೆಡೆ ಮಾವಿನಕಾಯಿ ಅಥವಾ ಹುಣಸೇಹಣ್ಣಿನಿಂದ ನೀರ್ ಗೊಜ್ಜು ಎಂಬ ಸ್ವಾದಿಷ್ಟ ಪದಾರ್ಥವನ್ನು ತಯಾರಿಸುತ್ತಾರೆ. ಆದರೆ ನೀರು ಮಜ್ಜಿಗೆ ಎಂಬ ಪದ ಕರ್ನಾಟಕದ ಎಲ್ಲ ಕಡೆ ಬಳಕೆಯಲ್ಲಿರುವಂತೆ ತೋರುತ್ತದೆ. ವಿಶೇಷವೆಂದರೆ ಇವೆಲ್ಲ ಬಹಳ ರುಚಿಕರವಾದ ಪದಾರ್ಥಗಳು. ನೀರು ನೀರಾದ ಹಾಲು, ಕಾಫಿ, ಚಹಗಳಂತೆ ಸಪ್ಪೆ ಸಪ್ಪೆ ಅನ್ನಿಸಲ್ಲ!