ಈ ನಡುವೆ ಒಂದು ದಿನ  ಸಂಜೆ ನನ್ನ ದೂರವಾಣಿ ರಿಂಗಣಿಸಿತು.‌ ಬಿ.ಎಸ್ಸಿ. ವಿದ್ಯಾರ್ಥಿನಿಯೊಬ್ಬಳು ಮಾತಾಡುತ್ತ ” ನಾನು ಈಗ ಮೂರನೇ ವರ್ಷ ಬಿ.ಎಸ್ಸಿ.ಓದ್ತಾ ಇದ್ದೀನಿ ಮ್ಯಾಮ್.‌ ನಾನು ಹಿಂದಿನ ವರ್ಷದ ಕನ್ನಡ ಪರೀಕ್ಷೆ ತಗೋಬೇಕು, ಯಾವ ಟೆಕ್ಸ್ಟ್ ( ಪಠ್ಯಪುಸ್ತಕ) ಓದ್ಬೇಕು ಅಂತ ಗೊತ್ತಾಗ್ತಾ ಇಲ್ಲ, ಪ್ಲೀಸ್ ಹೇಳಿ ಮ್ಯಾಮ್” ಅಂದಳು.  ನಾನು “ನಾಳೆ ಕಾಲೇಜಿಗೆ ಬಾಮ್ಮ,  ನೋಡಿ ಹೇಳ್ತೀನಿ” ಅಂದೆ. 

ಸರಿ, ಸೂಚನೆಯ ಪ್ರಕಾರ ಮೇಲೆ ಹೇಳಿದ ವಿದ್ಯಾರ್ಥಿನಿ ಕಾಲೇಜಿಗೆ ನಮ್ಮ ಕನ್ನಡ ವಿಭಾಗಕ್ಕೆ ಬಂದಳು‌. ನಾನು ಅವಳು ಓದಿದ ವರ್ಷ ಇತ್ಯಾದಿ ಕೇಳಿ ಯಾವ ಪಠ್ಯಪುಸ್ತಕ ಓದಿದ್ದು, ಪರೀಕ್ಷೆ ಬರೆದಿದ್ದು ಯಾವಾಗ ಎಂದೆಲ್ಲ ವಿಚಾರಿಸಿದಾಗ ವಿಪರೀತ ಗೊಂದಲ ಮಾಡಿಕೊಂಡಳು.‌  ನಾನು   ನಮ್ಮ‌ ವಿಭಾಗದಲ್ಲಿ ಇದ್ದ 2-3 ವರ್ಷಗಳ ಪಠ್ಯಪುಸ್ತಕ ತೋರಿಸಿ “ಇದರಲ್ಲಿ ಯಾವುದನ್ನು ಓದಿದ್ಯಮ್ಮ? ನೋಡು, ನೆನಪಾಗುತ್ತಾ? ” ಅಂದೆ.  ಆ ಹುಡುಗಿಗೆ ಏನು ಮಾಡಿದರೂ ರವೆಯಷ್ಟೂ ಏನೂ ನೆನಪಾಗಲಿಲ್ಲ!!  ‘ಮರ್ತ್ಹೋಗಿದೆ ಮ್ಯಾಮ್,   ಒಂದ್ನಿಮಿಷ ಫ್ರೆಂಡ್ ಗೆ ಫೋನ್ ಮಾಡ್ತೀನಿ” ಎಂದು ಓಡಿದಳು! ನಮ್ಮ ಇಂಗ್ಲಿಷ್ ವಿಭಾಗದ ಅಧ್ಯಾಪಕರಿಗೆ ಬೃಹಸ್ಪತಿಯ ಈ ಸ್ತ್ರೀ ರೂಪವನ್ನು ನೋಡಿ ಹಿಡಿಸಲಾರದಷ್ಟು ನಗು! “ಏನ್ ಮೇಡಂ, ನಿಮ್ಮ ಶಿಷ್ಯೆ! ಓದಿದ ಒಂದು ಪಾಠಾನೂ ನೆನಪಿಲ್ವಲ್ಲಾ ಅವ್ಳಿಗೆ!” ಎಂದು ತಮಾಷೆ ಮಾಡಿದರು. ಅಷ್ಟು ಹೊತ್ತಿಗೆ ಕರೆ ಮಾಡಿ ಮರಳಿ ಬಂದ ನನ್ನ ಶಿಷ್ಯೋತ್ತಮೆ ‘ ಹಾಂ, ನೆನಪಾಯ್ತು ಮೇಡಂ..ಫ್ರೆಂಡ್ ಹೇಳಿದ್ಲು, ಅತಿಭಕ್ತನ ರಗಳೆ ಇತ್ತು’ ಅಂದಳು.‌ ‘ಅಬ್ಬ! ಅಂತೂ ನೆನಪಾಯಿತಲ್ಲ ಇವಳಿಗೆ’ ಅಂದುಕೊಂಡೆ. ನನ್ನ ಪಠ್ಯಪುಸ್ತಕವನ್ನು ಒಂದು‌ ಪ್ರತಿ‌ ಮಾಡಿಸಿ ತರುತ್ತೇನೆ ಎಂದು ತೆಗೆದುಕೊಂಡು ಹೋದ ಈ ವಿದ್ಯಾರ್ಥಿನಿ ಎಷ್ಟು ದಿನವಾದರೂ ಬರಲಿಲ್ಲ! ಬಹುಶಃ ಯಾವ  ಪಠ್ಯಪುಸ್ತಕ ಓದಿದ್ದೆ ಎಂಬುದನ್ನು ಮರೆತಂತೆ, ಅದನ್ನು ಅಧ್ಯಾಪಕರಿಗೆ ಮರಳಿಸಬೇಕು ಎಂಬುದನ್ನೂ‌ ಮರೆತಳೋ ಏನೋ!!

ಅಣ್ಣಾವ್ರ ಹಾಡು ನೆನಪಾಗ್ತಾ ಇದೆ….”ನಗುವುದೋ ಅಳುವುದೋ ನೀವೇ ಹೇಳಿ..”….