ಊಟ ಬಡಿಸುವಾಗ ‘ಸ್ವಲ್ಪ ಹಾಕಿ’, ‘ಇನ್ನು ಸ್ವಲ್ಪ ಬಡಿಸ್ಲಾ?’ ಎನ್ನುವ ಪದಪ್ರಯೋಗವನ್ನು ನಾವೆಲ್ಲ ಕೇಳಿರುತ್ತೇವೆ, ಸ್ವತಃ ಬಳಸಿಯೂ ಇರುತ್ತೇವೆ. ನಿಘಂಟಿನಲ್ಲಿ ಈ ಪದಕ್ಕೆ ನಾಮಪದವಾದಾಗ ‘ಅಲ್ಪವಾದುದು; ಕ್ಷುದ್ರವಾದುದು’, ಗುಣ ವಿಶೇಷಣವಾದಾಗ ‘ತುಸು, ಕೊಂಚ, ಅಲ್ಪ’ ಎಂಬ ಅರ್ಥಗಳಿವೆ. ಹೊಸದಾಗಿ ಕನ್ನಡ ಕಲಿಯುತ್ತಿರುವ ಪರಭಾಷಿಕರನ್ನು ಯಾರಾದರೂ ‘ ನಿಮಗೆ ಕನ್ನಡ ಬರುತ್ತಾ?’ ಎಂದು ಕೇಳಿದರೆ ಅವರು ‘ಸ್ವಲ್ಪ ಸ್ವಲ್ಪ’ ಎನ್ನುವುದನ್ನು ಕೇಳಿರುತ್ತೇವೆ ಅಲ್ಲವೇ? ಮಾತುಕತೆಗಳಲ್ಲಿ ‘ಅಲ್ಪಸ್ವಲ್ಪ’ ಎಂಬ ಪದಪ್ರಯೋಗ ಕೂಡ ಇದೆ. “ಸಂಗೀತ ಅಲ್ಪಸ್ವಲ್ಪ ಕಲಿತಿದ್ದೇನೆ”, ದೆಹಲಿಯ ಬಗ್ಗೆ ನನಗೆ ಅಲ್ಪಸ್ವಲ್ಪ ಮಾತ್ರ ಗೊತ್ತು” ಹೀಗೆ…
ಬಹಳ ವಿಚಿತ್ರ ಅಂದರೆ ಕನ್ನಡದಲ್ಲಿ ಈ ಪದವನ್ನು ಇಂಗ್ಲೀಷಿನ ‘ please’ ಅಥವಾ ‘excuse me’ ಪದಕ್ಕೆ ಭಾವಸಂವಾದಿಯಾಗಿ ಬಳಸಲಾಗುತ್ತದೆ! ಉದಾಹರಣೆಗೆ, ‘ಪೆನ್ ಕೊಡ್ತೀರಾ ಸ್ವಲ್ಪ?’, ‘ ನಿಮ್ಮ ಫೋನ್ ಕೊಡ್ತೀರಾ ಸ್ವಲ್ಪ?’, ‘ರೀ ಸ್ವಾಮಿ, ಜಾಗ ಬಿಡ್ತೀರಾ ಸ್ವಲ್ಪ?’, ‘ ಈ ಕಡೆ ನೋಡ್ತೀರಾ ಸ್ವಲ್ಪ’….ಹೀಗೆ. ಯಾರೂ ಸ್ವಲ್ಪ ಪೆನ್ನು, ಫೋನು ಕೊಡಲು, ಸ್ವಲ್ಪ ‘ಈ ಕಡೆ’ ನೋಡಲು ಸಾಧ್ಯ ಇಲ್ಲ ಅಲ್ಲವೇ? ಕೊಟ್ಟರೆ ಪೂರ್ತಿ ಪೆನ್ನನ್ನೇ ಅಥವಾ ಫೋನನ್ನೇ ಕೊಡಬೇಕು, ನೋಡಿದರೆ ಪೂರ್ತಿಯಾಗಿ ‘ಈ ಕಡೆ’ ನೋಡಬೇಕು. ‘ಸ್ವಲ್ಪ ಆರತಿ ಮಾಡಿ ಪುರೋಹಿತರೇ”, ‘ಸ್ವಲ್ಪ ಸುಮ್ಮನಿರ್ತೀರಾ?”…..
ಹೀಗೆ ಅನೇಕ ಉದಾಹರಣೆಗಳನ್ನು ಕೊಡಬಹುದು.
ನಾನು ಸದ್ಯಕ್ಕೆ ಈ ‘ಸ್ವಲ್ಪ’ ಪದದ ಬಗೆಗೆ ಕೊರೆಯೋದನ್ನ ಸ್ವಲ್ಪ ನಿಲ್ಲಿಸ್ತೇನೆ. ನೀವು ಈ ಬಗ್ಗೆ ಸ್ವಲ್ಪ ಯೋಚನೆ ಮಾಡಿ. ಸರಿಯೇ?
								
 Like us!
 Follow us!