ಚಟ್ನಿ. ಈ ಪದದ ಬಳಕೆ ಮಾಡದ ಕನ್ನಡಿಗರಾರು? ಇಡ್ಲಿ ಚಟ್ನಿ, ತೆಂಗಿನಕಾಯಿ ಚಟ್ನಿ, ಕೆಂಪು ಚಟ್ನಿ, ಪುದಿನಾ ಚಟ್ನಿ, ಶೇಂಗಾ ಚಟ್ನಿ, ಈರುಳ್ಳಿ ಚಟ್ನಿ… ಓಹ್…..ಅದೆಷ್ಟು ವೈವಿಧ್ಯ ಇದರಲ್ಲಿ! ವಿವಿಧ ತರಕಾರಿಗಳು, ಹಣ್ಣುಗಳು, ಒಣಹಣ್ಣುಗಳನ್ನು ಬಳಸಿ ಥರಾವರಿ ಚಟ್ನಿಗಳನ್ನು ಪ್ರಪಂಚದಾದ್ಯಂತ ಮಾಡುತ್ತಾರೆ.‌ಉತ್ತರ ಭಾರತೀಯ‌ರ ಚಾಟ್ ಅಂಗಡಿಗಳಲ್ಲಿ ಸಿಹಿ ಚಟ್ನಿ ಮಾಡುವಾಗ ಖರ್ಜೂರ ಹಾಕ್ತಾರಂತೆ! ಹೋಟೆಲ್ ಗಳಲ್ಲಿ ತಾವು ಇಡ್ಲಿಗೆ ‘ಅನ್ಲಿಮಿಟೆಡ್ ಚಟ್ನಿ’ ಕೊಡುತ್ತೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಧಾರವಾಡದ ಕಡೆ ಚಟ್ನಿಪುಡಿಗೆ ಚಟ್ನಿ ಅಂತಾರೆ. ಮಂಗಳೂರಿನಲ್ಲಿ ತೆಳು ಅವಲಕ್ಕಿಗೆ ತೆಂಗಿನಕಾಯಿ ತುರಿ, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಉಪ್ಪು, ಸಕ್ಜರೆ, ಹಾಕಿ ಕಲಸಿ ದಿಢೀರನೆ ಮಾಡುವ ತಿಂಡಿಗೆ ‘ಅವಲಕ್ಕಿ ಚಟ್ನಿ’ ಅಂತಾರೆ! ಅಸಲಿಗೆ ಅದು ಚಟ್ನಿಯೇ ಅಲ್ಲ. ಚುರುಮುರಿಯಂತಹ ಒಂದು ತಿಂಡಿ! ಇನ್ನು ಮಲೆನಾಡಿನ ಕಡೆ ಇರುವೆ ಗೂಡನ್ನು ಇರುವೆ ಸಮೇತ ರುಬ್ಬಿ ಚಟ್ನಿ ಮಾಡುತ್ತಾರಂತೆ! ಇದು ತುಂಬ  ರುಚಿ ಎಂಬುದು ಅದನ್ನು ತಿಂದ ಮಲೆನಾಡಿನವರ ಅಂಬೋಣ. ಅಂದ ಹಾಗೆ ಹಣ್ಣು ಮೆಣಸಿನಕಾಯಿಯ ಚಟ್ನಿಯನ್ನು  ಧಾರವಾಡದ ಕಡೆ ರಂಜಕ ಅನ್ನುತ್ತಾರೆ! 

ಅಸಲಿಗೆ ಚಟ್ನಿ ಎಂಬ ಪದ ಚಾಟ್ನಾ ಎಂಬ ಹಿಂದಿ ಪದದಿಂದ ಬಂದದ್ದಂತೆ.  ಚಾಟ್ನಾ ಅಂದರೆ ನೆಕ್ಕಿಕೊಂಡು ತಿನ್ನು, ರುಚಿಸಿಕೊಂಡು ತಿನ್ನು ಅಂದು ಆ ಭಾಷೆಯಲ್ಲಿ ಅರ್ಥವಂತೆ. ಯುರೋಪಿಗೆ ಚಟ್ನಿ ಎಂಬ ಪದ ಪರಿಚಯವಾದದ್ದೇ ಭಾರತೀಯ ಮೂಲದಿಂದ ಎಂದು ಇತಿಹಾಸ ಹೇಳುತ್ತದೆ‌. 

ಆಡುಮಾತಿನ ಅನೌಪಚಾರಿಕ ಸಂದರ್ಭಗಳಲ್ಕಿ ತುಂಬ ಕಷ್ಟಕರ ಸಂದರ್ಭಗಳನ್ನು ಎದುರಿಸಿದಾಗ ‘ಅಯ್ಯೋ, ಚಟ್ನಿ ಆಗ್ಹೋದೆ ನಾನು’ ಎನ್ನುತ್ತೇವಲ್ಲ. ಕೋಪ ಬಂದಾಗ ‘ನೋಡು… ನಿನ್ನ ಚಟ್ನಿ ಮಾಡ್ಬಿಡ್ತೀನಿ ಅಷ್ಟೇ’ ಅನ್ನುವವರಿದ್ದಾರೆ.  ‘ ರಾಗಿರೊಟ್ಟಿ ಹುಚ್ಚೆಳ್ ಚಟ್ನಿ’ ಎಂಬ ಪದಪುಂಜವನ್ನು ಸಿನಿಮಾ ಹಾಡುಗಳಲ್ಲಿ ಬಳಸುತ್ತಾರೆ. ಅಂದ ಹಾಗೆ ಹುಚ್ಚೆಳ್ ಚಟ್ನಿ ಎಂಬುದು ಕನ್ನಡ ನಾಡಿನ ಜಾನಪದ ಮೂಲದ ಪ್ರಸಿದ್ದ ಚಟ್ನಿ. ‌

ಇನ್ನೂ ಚಟ್ನಿ ಬಗ್ಗೆ ಕೊರೆದರೆ ನಿನ್ನೇ ಚಟ್ನಿ ಮಾಡ್ತೀನಿ‌ ನೋಡು ಅಂತೀರೇನು! ಅಯ್ಯೋ ನಿಲ್ಲಿಸುವೆ ಇಲ್ಲಿಗೆ. ಸರಿಯೇ?