ಬೆಂಗಳೂರಿನಲ್ಲಿ ಓಡಾಡುವಾಗ, ಜನರೊಂದಿಗೆ ಮಾತಾಡುವಾಗ ಈ ಬಗೆಯ ವಾಕ್ಯಗಳು ಕಿವಿಗೆ ಬೀಳುತ್ತವೆ – ” ಆಫೀಸ್ ತಲುಪ್ದೆ ಕಣೋ ಆಲ್ಮೋಸ್ಟು”, “ನಾನು ಈ ಕಡೇನೆ ಹೋಗೋದು ಮೋಸ್ಟ್ ಆಫ್ ದ ಟೈಮ್ಸು”,  ನೈಟೇ ನಿಮ್ಗೆ ಕಾಲ್ ಮಾಡಿದ್ನಲ್ಲಾ,  ಐ ಥಿಂಕ್ ಯೂ ವರ್ ಬಿಸಿ”,  ” ನೀ ಕಂಟಿನ್ಯುವಸ್ ಆಗಿ ಬಂದ್ರೆ ತಾನೇ, ಒನ್ಸ್ ಇನ್ ಎ ಬ್ಲೂಮೂನ್ ಬರ್ತೀಯ”, “ಆಲ್ ಆಫ್ ಅ ಸಡನ್ ನಮ್ ಬಾಸ್ ಮೀಟಿಂಗ್ ಕರೆದ್ಬಿಟ್ರು, ಸಾರಿ ಕಣೇ, ಐ ವಾಸ್ ಹೆಲ್ಪ್ಲೆಸ್, ಐ ಥಾಟ್ ಐ ವಿಲ್ ಕಾಲ್ ಯೂ ಅಂತ, ಸಂಹೌ ಐ ಫರ್ಗಾಟ್”…..

ಎರಡೂವರೆ ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕನ್ನಡ ಪಾಠ ಮಾಡುತ್ತಿರುವ ಹಾಗೂ ಕನ್ನಡ ಎಂ.ಎ.ನಲ್ಲಿ ತಕ್ಕಮಟ್ಟಿಗೆ ಭಾಷಾವಿಜ್ಞಾನವನ್ನು‌ ಓದಿರುವ ನನಗೆ ಬೆಂಗಳೂರಿಗರ ಅದರಲ್ಲೂ ವಿದ್ಯಾವಂತರ ಈ ಬೆರಕೆ ಭಾಷೆ ಕುತೂಹಲ ಹುಟ್ಟಿಸುತ್ತದೆ. ಭಾಷಾ ಶಾಸ್ತ್ರಜ್ಞರು ಶಾಸ್ತ್ರೀಯವಾಗಿ  ನುಡಿ ಬೆರಕೆ, ನುಡಿ ಜಿಗಿತ ಎಂದು ಗುರುತಿಸುವ ಈ ಭಾಷಾ ವಿದ್ಯಮಾನಗಳು ನಡೆಯಲು ಕಾರಣವೇನು ಎಂಬ ಪ್ರಶ್ನೆ ಬರುತ್ತದೆ. (ನುಡಿ ಬೆರಕೆ = ಒಂದು ಭಾಷೆಯಲ್ಲಿ ಮಾತಾಡುತ್ತಿರುವಾಗ ನಡುನಡುವೆ ಇನ್ನೊಂದು ಭಾಷೆಯ ಪದಗಳನ್ನು ಸೇರಿಸುವುದು, ನುಡಿ ಜಿಗಿತ = ಸಂಭಾಷಣೆಯುದ್ದಕ್ಕೂ ಒಂದು ಭಾಷೆ ಮಾತಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಇನ್ನೊಂದು ಭಾಷೆಗೆ ಜಿಗಿಯುವುದು, ಮತ್ತೆ ಮರು ಜಿಗಿತ ಮಾಡಿ ಮೂಲಭಾಷೆಗೆ ಮರಳುವುದು). 

ಇಂಗ್ಷಿಷ್ ಮಾಧ್ಯಮದ ವಿದ್ಯಾಭ್ಯಾಸ, ಕನ್ನಡ ಬರದ ಸಹೋದ್ಯೋಗಿಗಳೊಂದಿಗೆ  ಕೆಲಸ ಮಾಡಬೇಕಾದ ಸನ್ನಿವೇಶ, “ಭಾಷೆ ಒಂದು ಉಪಕರಣ ಅಷ್ಟೆ, ಕನ್ನಡ ಪದವೋ, ಇಂಗ್ಲಿಷ್ ಪದವೋ‌, ಹಿಂದಿ‌ ಪದವೋ ಯಾವುದೋ ಒಂದು ..ಒಟ್ಟಿನಲ್ಲಿ ಅರ್ಥ ಆದರೆ ಸಾಕು” ಎಂಬ ಮನೋಭಾವ –  ಇವೆಲ್ಲವೂ ಜನರು ಹೀಗೆ ಮಾತಾಡಲು ಕಾರಣವಿರಬಹುದು.‌ ಈ ಇಂಗ್ಲಿಷ್ ಮಿಶ್ರಿತ ಕನ್ನಡ ಎಷ್ಟು ವ್ಯಾಪಕವಾಗಿ,  ಢಾಳಾಗಿ ಕಾಣುತ್ತದೆ  ಅಂದರೆ ಇದನ್ನು ಕನ್ನಡದ ಪ್ರಾದೇಶಿಕ ರೂಪಗಳಲ್ಲಿ‌ ಒಂದು ಎಂದು ಭಾವಿಸಬೇಕೇನೋ ಅನ್ನಿಸುತ್ತದೆ. ‌ನವೋದಯ ಕಾಲದ ನಾಟಕಕಾರ ಟಿ.ಪಿ.ಕೈಲಾಸಂ(1884-1946) ಆಗಿನ ನವ ವಿದ್ಯಾವಂತರ ಇಂಗ್ಲಿಷ್ ಮಿಶ್ರಿತ ಕನ್ನಡವನ್ನು ತಮ್ಮ ನಾಟಕಗಳಲ್ಲಿ ‌ಪಾತ್ರಸೃಷ್ಟಿಯ ಮೂಲಕ ಲೇವಡಿ ಮಾಡಿದ್ದರು. ಈಗಂತೂ ಬೆಂಗಳೂರಿಗರೆಲ್ಲರೂ ಹೆಚ್ಚು ಕಡಿಮೆ ಟಿ.ಪಿ.ಕೈಲಾಸಂ ಪಾತ್ರಗಳಂತೆಯೇ ಮಾತಾಡುತ್ತಾರೆ!