ನಮ್ಮ ದೈನಂದಿನ ಮಾತುಕತೆಯಲ್ಲಿ ಕತೆ/ಕಥೆ ಎಂಬ ಪದ ಮತ್ತು ಪರಿಕಲ್ಪನೆಯ ಪ್ರಯೋಗವನ್ನು ಎಷ್ಟು ವಿಪುಲವಾಗಿ ಮಾಡುತ್ತೇವೆ ಎಂದು ಗಮನಿಸಿದರೆ ಆಶ್ಚರ್ಯ ಆಗುತ್ತದೆ. ಮಾತುಕತೆ ಎಂಬ ಪದದಲ್ಲೇ ಕತೆ ಇದೆ! ಮಾತುಕತೆ ಅನ್ನುವ ಪದವನ್ನು ಕುಟುಂಬದ ಆಸ್ತಿ ಹಂಚಿಕೆ, ಮದುವೆ, ವ್ಯಾಪಾರ ಮುಂತಾದ ಅನೇಕ‌ ಸಂದರ್ಭಗಳಲ್ಲಿ ಬಳಸುತ್ತೇವಲ್ಲ ನಾವು! 

ಇನ್ನು ನಾವು  ಕನ್ನಡಿಗರು ‌‌ಆಗಾಗ ಬಳಸುವ ವಾಕ್ಯಗಳನ್ನು ಗಮನಿಸೋಣ..  

ಅಯ್ಯೋ ಅದೊಂದು ದೊಡ್ಡ ಕಥೆ.

ನನ್ ಕಥೆ ಏನೂಂತ ಹೇಳಲಪ್ಪಾ..

ಅಯ್ಯೋ‌ ಕತಿಯಾ…!

ಏನೇ ಇದು ನಿನ್ನ ಕಥೆ!

ಹೀಗೆ ಅನೇಕ ರೀತಿಗಳಲ್ಲಿ ಕತೆ/ಕಥೆ ಎಂಬ ಪದವನ್ನು ನಾವು ಬಳಸುತ್ತಲೇ ಇರುತ್ತೇವೆ. ಜೊತೆಗೆ ನಮ್ಮ ಆಪ್ತರ ಹತ್ತಿರ ಆಡುವ ಮಾತುಗಳು ಕಥೆ ಹೇಳುವುದು, ಕಥೆ ಕೇಳುವುದೇ ಆಗಿರುತ್ತದೆ.‌ ಆ ಮಾತುಗಳು ಥೇಟು ಕಥೆಯ ಶೈಲಿಯಲ್ಲಿ ಇರುತ್ತವಲ್ಲವೇ! 

ಶಾಲೆ ಕಾಲೇಜುಗಳಲ್ಲಿ‌ ಯಾವ ವಿಷಯವನ್ನಾದರೂ ಕಥೆ ಹೇಳಿದಂತೆ ಪಾಠ ಮಾಡುವ ಅಧ್ಯಾಪಕರು ಜನಪ್ರಿಯರಾಗಿರುತ್ತಾರೆ! ಆಕರ್ಷಕ ಭಾಷಣಗಾರರು ತಮ್ಮ ಮಾತುಗಳ ನಡುವೆ ಎಷ್ಟೋ ಕಥೆಗಳನ್ನು ಬಳಸುತ್ತಾರೆ‌. ಚಿಕ್ಕ ಮಕ್ಕಳಿಗಂತೂ ಮಲಗುವ ಮುನ್ನ ಒಂದು ಕಥೆ ಕೇಳಿಯೇ ಮಲಗುವುದು ತುಂಬ ಇಷ್ಟ. ಮನುಷ್ಯ ಎಂಬವನು ತಾನು ಹೇಳುವ ಮತ್ತು ಕೇಳುವ ಕಥೆಗಳ ಮೊತ್ತವೇ ಆಗಿರುತ್ತಾನೆ. ಅಜ್ಜಿಕತೆ, ಜನಪದ ಕತೆ, ಧಾರ್ಮಿಕ ಕಥೆ, ಸಣ್ಣಕಥೆ, ನೀಳ್ಗತೆ, ಕಿರುಕಥೆ, ಕವಿತೆಯ ರೂಪದಲ್ಲಿರುವ ಕಥನಕವನ ಎಂಬ ಕಥೆ….ಓಹ್ ಅದೆಷ್ಟು ರೀತಿಯ ಕಥೆಗಳಿವೆ ನಮ್ಮ ನಡುವೆ! 

ಪ್ರತಿ ಬುಧವಾರ ಈ‌ ಜಾಲಪುಟ ಲೇಖಕಿ ಬರೆಯುವ ಕನ್ನಡ ಪ್ರಸಂಗಗಳೂ ಕಥೆಗಳೇ ತಾನೇ.‌ ಒಟ್ಟಿನಲ್ಲಿ ಕಥೆ ಹೇಳುವುದು ಮತ್ತು ಕೇಳುವುದೇ ನಾವು ಖುಷಿಯಿಂದ, ಪ್ರೀತಿಯಿಂದ ಬದುಕುವುದಕ್ಕೆ ಸಂಕೇತವೋ ಏನೋ.

ಕಥೆ ಹೇಳುವ ಕಥೆ ಕೇಳುವ ಆಸಕ್ತಿ ಸದಾ ನಮ್ಮನ್ನು ಕಾಯಲಿ.