ನಾವು ( ಅಂದರೆ ಈಗ ಐವತ್ತು ವರ್ಷದ ಆಸುಪಾಸಿನಲ್ಲಿರುವ ಮಂದಿ)  ಚಿಕ್ಕವರಾಗಿದ್ದಾಗ ನಮಗೆ ‘ಸ್ಥಳೀಯ’ ಹಣ್ಣುಗಳಾದ ಬಾಳೆ, ಮಾವು, ಸೀಬೆ, ಹಲಸು ಮುಂತಾದವುಗಳ ಪರಿಚಯ ಇತ್ತೇ ಹೊರತು ಸ್ಟ್ರಾಬೆರಿ, ಪ್ಲಮ್, ಪಿಯರ್, ಡ್ರ್ಯಾಗನ್ ಫ್ರೂಟ್, ಟ್ಯಾಂಜಾರಿನ್, ಕಿವಿ ಮುಂತಾದ ವಿದೇಶೀ ಫಲಾವಳಿಯ ಪರಿಚಯ ಇರಲಿಲ್ಲ. ಕಥೆ, ಕಾದಂಬರಿ, ವೃತ್ತಪತ್ರಿಕೆಗಳಲ್ಲಿ ಇಂಥವುಗಳ ಹೆಸರುಗಳನ್ನು  ಓದುತ್ತಿದ್ದೆವೇ ಹೊರತು,ಆ ಹಣ್ಣುಗಳನ್ನು  ನಿಜವಾಗಿ ನೋಡಿ, ಮುಟ್ಟಿ, ತಿನ್ನುವ ಪ್ರಶ್ನೆಯೇ ಇರಲಿಲ್ಲ.‌ ಆದರೆ, ಇಂದು ಜಾಗತೀಕರಣವಾಗಿ ಮೂವತ್ತು ವರ್ಷಗಳೇ ಆಗಿಹೋಗಿರುವ  ಸನ್ನಿವೇಶದಲ್ಲಿ, ಕೇವಲ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಮಾತ್ರವಲ್ಲದೆ ಚಿಕ್ಕಪುಟ್ಟ ತರಕಾರಿ ಅಂಗಡಿಗಳಲ್ಲೂ ಈ ವಿದೇಶೀ ಫಲಗಳು ರಾರಾಜಿಸುತ್ತವೆ‌‌!

ಸಂದರ್ಭ ಹೀಗಿರುವಾಗ, ಈಗ 2-3 ವರ್ಷಗಳ ಹಿಂದೆ ನಾನು ಹಣ್ಣಿನಂಗಡಿಯೊಂದರಿಂದ ಅವರು ಪಿಯರ್ ಎಂದು ಹೆಸರಿಸಿದ ಹಣ್ಣೊಂದನ್ನು ತಂದೆ.‌ ‘ನೋಡೋಣ, ಹೇಗಿರಬಹುದು ಇದು!?’, ಎಂಬ ಕುತೂಹಲ ಇತ್ತು ನನಗೆ. ಕೆಲವು ಆರೋಗ್ಯ ಸಂಬಂಧೀ ಇಂಗ್ಲಿಷ್ ಲೇಖನಗಳಲ್ಲಿ, ಸೊಂಟದಿಂದ ಕೆಳಗೆ ಬೊಜ್ಜು ಬಂದಿರುವ ಹೆಂಗಸರನ್ನು ‘ಪಿಯರ್ ಶೇಪ್ಡ್ ವಿಮೆನ್’ ಎಂದು ಪ್ರಸ್ತಾಪಿಸುವುದನ್ನು ಓದಿದ್ದೆ.‌ ಸಾಮಾನ್ಯ ವಿದ್ಯುತ್ ಬುರುಡೆಯ ( ಲೈಟ್ ಬಲ್ಬ್)  ಆಕಾರದಲ್ಲಿರುವ ಒಂದು ಹಣ್ಣು ಅದು. ಹಸುರು-ಹಳದಿ-ನಸುಗೆಂಪು ಸಿಪ್ಪೆ ಹೊಂದಿರುತ್ತದೆ, ಬಿಳಿ ಬಣ್ಣದ ತಿರುಳು, ಅದರ ಮಧ್ಯದಲ್ಲಿ ಕರಿ ಬಣ್ಣದ ಬೀಜಗಳಿರುತ್ತವೆ. ಇದನ್ನು ತಿಂದವರಿಗೆ ಗೊತ್ತಿರುತ್ತದೆ – ಹೆಚ್ಚು ಕಮ್ಮಿ ಸೇಬು ಹಣ್ಣಿನಂತೆ ಇದರ ಒಳಗು, ಆದರೆ ಹುಳಿಯ ಛಾಯೆ ಇರುವುದಿಲ್ಲ‌, ಒಂದು ರೀತಿ ಸಿಹಿ-ಸಪ್ಪೆಯ ನವಿರು ರುಚಿ.‌ ಸಿಪ್ಪೆ ತೆಗೆಯುವ ಕಷ್ಟವೇ ಇಲ್ಲ, ತೊಳೆಯುವುದು, ಸೀದಾ ಹೆಚ್ಚುವುದು, ಬೀಜ ತೆಗೆಯುವುದು, ತಿನ್ನುವುದು ಅಷ್ಟೇ. ಅಡುಗೆಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟ ಪಡದವರಿಗೆ, ಕೆಲಸ ಸುಲಭ ಮಾಡುವ ಹಣ್ಣು ಇದು. ದುಬಾರಿ ಅನ್ನುವುದಷ್ಟೇ ಇದರ ಬಗೆಗೆ ನಾವು ದಕ್ಷಿಣ ಭಾರತದವರು ಹೇಳಬಹುದಾದ ದೂರು.‌

ಇಂತಹ ಸೌಮ್ಯ ರುಚಿಯ ಹಣ್ಣಿಗೆ ಕನ್ನಡದಲ್ಲಿ‌ ಏನು ಹೇಳ್ತಾರೆ ಎಂಬ ಕುತೂಹಲ ನನ್ನಲ್ಲಿ ಉಂಟಾಯಿತು. ‌ಕೆಲವರು ಇದು ‘ಮರಸೇಬು’  ಅಂದರು.  ಅದರೆ ಇದು ಮರಸೇಬು ಅಲ್ಲ ಎಂದು ನನಗೆ ಗೊತ್ತಿತ್ತು, ಏಕೆಂದರೆ ಮರಸೇಬಿನ ಆಕಾರ, ರುಚಿ ಎಲ್ಲ ನನಗೆ ಚಿಕ್ಕಂದಿನಿಂದಲೇ ಪರಿಚಯ ಇತ್ತು. ಈಚೆಗೆ ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸಕ್ಕೆ ಹೋದಾಗ ನನಗೆ ಒಂದು ಸಿಹಿಯಾದ ಅಚ್ಚರಿ ಕಾದಿತ್ತು. ಎಲ್ಲಿ‌ ನೋಡಿದರಲ್ಲಿ ಈ ಪಿಯರ್ ಹಣ್ಣಿನ ಮರಗಳು!! ಸೇಬು ಮರಗಳ ಅಕ್ಕಪಕ್ಕದಲ್ಲಿ ವಿಪುಲವಾಗಿ ಬೆಳೆದಿದ್ದವು ಅವು.‌ ನೋಡಿ ನನಗೆ ತುಂಬಾ ಖುಷಿಯಾಯಿತು. ಆದರೆ, ನಾವು ಹೋದದ್ದು ಜೂನ್ ತಿಂಗಳಿನಲ್ಲಾದ್ದರಿಂದ ತುಂಬ ಚಿಕ್ಕದಾಗಿ, ಪೀಚುಪೀಚಾಗಿದ್ದ ಆ ಹಣ್ಣುಗಳನ್ನು ನಾವು ತಿನ್ನುವುದು ಸಾಧ್ಯ ಇರಲಿಲ್ಲ.‌ ಅಕ್ಟೋಬರ್‌ನಲ್ಲಿ ಅವು ಮಾಗುತ್ತವೆ ಎಂದು ತಿಳಿಯಿತು.‌ ಹಿಂದಿ ಭಾಷೆಯಲ್ಲಿ ಇದಕ್ಕೆ ಏನಂತಾರೆ ಅಂತ  ಸ್ಥಳೀಯರನ್ನು   ಕೇಳಿದೆ.‌ ‘ನಾಷ್ಪತಿ’ ಅಂದರು.‌ ಓಹ್….ಹಾಗಾದರೆ ಕನ್ನಡದಲ್ಲಿ? ಪ್ರಶ್ನೆ ಬಂತು ನನ್ನ ಮನಸ್ಸಿನಲ್ಲಿ. ‌

ಸರಿ, ಗುಂಗಿ ಹುಳದಂತೆ ಈ ಪ್ರಶ್ನೆ ಕೊರೆಯಲು ಶುರು ಮಾಡಿದಾಗ ನಾನು ಅನೇಕ ಜನರನ್ನು ಈ ಪ್ರಶ್ನೆ ಕೇಳಿದೆ. ಕೊನೆಗೆ, ಮನೆಯಲ್ಲಿ ತಮಿಳು ಮಾತಾಡುವ, ಆದರೆ ಕನ್ನಡ ಬಲ್ಲ ಸ್ನೇಹಿತರೊಬ್ಬರು ಇದಕ್ಕೆ ಬೇರಿಕಾಯಿ ಅಂತೀವಿ‌ ಅಂದರು! ಓಹ್…. ಇಂಗ್ಲಿಷ್ ಭಾಷೆಯ‌ ಪಿಯರ್  ಕನ್ನಡದ ಬೇರಿಕಾಯಿ ಆಯಿತೇ? ಅಂದುಕೊಂಡೆ.‌  ನಂತರ ಅನುಭವಿಯಾದ ಕನ್ನಡಿಗ ಹಣ್ಣು ವ್ಯಾಪಾರಿಯೊಬ್ಬರು, ಹೌದು, ಇದರ ಹೆಸರು ಬೇರಿಕಾಯಿ ಅಂದಾಗ ನನ್ನ ಅನುಮಾನ ಪರಿಹಾರ ಆಯಿತು.‌ ತಮಿಳಿನಲ್ಲಿ ಇದಕ್ಕೆ ಪೇರಿಕ್ಕಾಯ್ ಅಂತಾರಂತೆ.

ನೋಡಿ….ಇದು ಪಿಯರ್ ಎಂಬ ಹಣ್ಣು ನನ್ನನ್ನು ಕಾಡಿದ ಕಥೆ!! ಈಗ  ನಾವು ಒಟ್ಟಿಗೆ ಒಂದು ಪಿಯರ್ ತಿಂದು ನನ್ನ ಪಿರಿಪಿರಿ ಪ್ರಶ್ನೆಗೆ ಉತ್ತರ ಸಿಕ್ಕಿದ್ದನ್ನು ಸಂಭ್ರಮಿಸೋಣವೇ?