“ಅಧ್ಯಾಪಕರು ಚಿರಂತನ ಆಶಾವಾದಿಗಳು” ಎಂಬ ಒಂದು ಮಾತಿದೆ. ನಾಳೆಯ ಪ್ರಜೆಗಳಾದ ವಿದ್ಯಾರ್ಥಿಗಳ ಮನಸ್ಸನ್ನು ರೂಪಿಸುವ ಕೆಲಸ ಮಾಡುವ ಅವರು ಮುಂದಿನ ಪೀಳಿಗೆಗಳ ಬಗ್ಗೆ ಭರವಸೆ ಕಳೆದುಕೊಳ್ಳಬಾರದು ಎಂಬ ಆಶಯ ಈ ಸೂಕ್ತಿಯ ಹಿಂದೆ ಇದೆ ಅನ್ನಿಸುತ್ತೆ. ಈ ಹಿನ್ನೆಲೆಯಲ್ಲಿ ಒಬ್ಬ ಕನ್ನಡ ಅಧ್ಯಾಪಕಿಯಾಗಿ ನಾನು ಮುಂದಿನ ಪೀಳಿಗೆಗಳು ಕನ್ನಡವನ್ನು ತಮ್ಮ ಹೃದಯಕ್ಕೆ ಹತ್ತಿರವಿರಿಸಿಕೊಳ್ಳುವಂತೆ ಪ್ರೇರೇಪಿಸಲು ಏನು ಮಾಡಬಹುದು ಎಂದು ಯೋಚಿಸುತ್ತಾ ಇರುತ್ತೇನೆ.
ಹೀಗೆ ಯೋಚಿಸಿದಾಗ ಈ ಅಧ್ಯಾಪಕಿಗೆ ತೋಚಿದ ಒಂದು ಸರಳ ಉಪಾಯ ಅಂದರೆ ಪ್ರತಿದಿನವೂ ತರಗತಿಯಲ್ಲಿ ಕರಿಹಲಗೆಯ ಮೇಲೆ, ಕನ್ನಡ ರತ್ನಕೋಶದ ಸಹಾಯದಿಂದ ಒಂದು ಹೊಸಪದ ಮತ್ತು ಅದರ ಅರ್ಥ ಬರೆಯಲು ‘ನವಪದ ನಾಯಕಿ’ ಎಂಬ ಯೋಜನೆಯಡಿಯಲ್ಲಿ, ಪ್ರತಿ ತರಗತಿಗೂ ಮೂರು ಮೂರು ವಿದ್ಯಾರ್ಥಿನಿಯರನ್ನು ನೇಮಿಸುವುದು, ಮತ್ತು ಈ ಕೆಲಸವನ್ನು ಇಡೀ ಅರ್ಧವರ್ಷ ಅವರು ಅಚ್ಚುಕಟ್ಟಾಗಿ ಮಾಡಿದ್ದಾದರೆ, ಅರ್ಧವರ್ಷದ ಕೊನೆಯಲ್ಲಿ ಅವರಿಗೆ, ತರಗತಿಯ ಮಟ್ಟಿಗೆ ಒಂದು ಸಣ್ಣ ಸಮಾರಂಭ ಮಾಡಿ, ಪ್ರಾಂಶುಪಾಲರನ್ನು ಕರೆದು ಕನ್ನಡ
ಪುಸ್ತಕಗಳನ್ನು ಬಹುಮಾನ ಕೊಡಿಸುವುದು. ಇದೇ ರೀತಿಯಲ್ಲಿ ಕನ್ನಡದ ಗಾದೆಮಾತು/ನಾಣ್ಣುಡಿ/ಕವಿನುಡಿಗಳನ್ನು ದಿನಕ್ಕೊಂದರಂತೆ ವಿದ್ಯಾರ್ಥಿನಿಯರು ಕರಿಹಲಗೆಯ ಮೇಲೆ ಬರೆಯುವ ‘ಸೂಕ್ತಿ ಸಂಪಾದಕಿ’ ಯೋಜನೆ. ನಾನು ಮಹಿಳಾ ಕಾಲೇಜಿನಲ್ಲಿ ಕೆಲಸ ಮಾಡುವುದರಿಂದ ಈ ಬಿರುದುಗಳನ್ನು ಸ್ತ್ರೀಲಿಂಗದಲ್ಲಿ ಬರೆದಿದ್ದೇನೆ. ಪುರುಷ ವಿದ್ಯಾರ್ಥಿಗಳಿರುವ ಕಡೆ ‘ನವಪದ ನಾಯಕ’, ‘ಸೂಕ್ತಿ ಸಂಪಾದಕ’ ಎಂದು ಇವನ್ನು ಬದಲಾಯಿಸಿಕೊಳ್ಳಬಹುದು.
ತರಗತಿಗಳಲ್ಲಿ ರಾಷ್ಟ್ರವು ನಿರ್ಮಾಣ ಆಗುತ್ತದೆ ಅಂತಾರೆ, ಭಾಷೆಯೂ ಅಲ್ಲಿಯೇ ನಿರ್ಮಾಣವಾಗುವುದಲ್ಲವೇ?