ನಾವು ಕನ್ನಡ ಅಧ್ಯಾಪಕರು ನಮ್ಮ ಒಡನಾಡಿ ಎಂದು ಭಾವಿಸುವ ಯಾವುದಾದರೂ ಒಂದು ಪುಸ್ತಕ ಇದ್ದರೆ ಅದು ನಿಘಂಟು ಅಥವಾ ಪದಕೋಶ. ಪಾಠ ಸಿದ್ಧತೆಯ ಸಂದರ್ಭದಲ್ಲಿ ಕಷ್ಟ ಪದಗಳು ಬಂದಾಗ, ತಕ್ಷಣ ನಿಘಂಟಿನ ಮೊರೆ ಹೋಗುವವರು ನಾವು. ಅದು ರತ್ನಕೋಶದಂತಹ ಪುಟಾಣಿ ಕೈಪಿಡಿಯಾದರೂ ಸರಿ, ಅಥವಾ ಕಿಟೆಲ್ ವಿರಚಿತ ಬೃಹತ್ ಸಂಪುಟವಾದರೂ ಸರಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನ ಸರಣಿಯಾದರೂ ಸರಿ, ಅಥವಾ ಇಂಗ್ಲಿಷ್-ಇಂಗ್ಲಿಷ್ – ಕನ್ನಡ ಭಾರದ್ವಾಜ ನಿಘಂಟಾದರೂ ಸರಿ, ಅರ್ಥ ಗೊತ್ತಿಲ್ಲದ ಪದವನ್ನು ಹುಡುಕುವುದು ನಮ್ಮ ಜಾಯಮಾನ.
ಮೇಲೆ ಹೇಳಿದಂತೆ ಹುಡುಕಾಡುವಾಗ ನಾನು ಗಮನಿಸಿದ ಸಂಗತಿ ಅಂದ್ರೆ, ನಿಘಂಟಿನಲ್ಲಿರುವ ಪದಗಳಲ್ಲಿ 30-40 ಶೇಕಡ ಪದಗಳಷ್ಟೇ ನಮಗೆ ಪರಿಚಿತವಾಗಿರುತ್ತವೆ, ಉಳಿದ 60-70 ಶೇಕಡ ಪದಗಳನ್ನು ನಾವು ಬಳಸುವುದೇ ಇಲ್ಲ! ಕೆಲವು ಉದಾಹರಣೆಗಳನ್ನು ನೋಡೋಣವೇ?
ಅಗಲು = ಊಟದ ತಟ್ಟೆ
ಕಲಹಕೃಷ್ಣಕ = ಜಗಳ ಹಚ್ಚುವವನು
ಕಸುಕ = ಆಳು, ಸೇವಕ
ಗಗನಕುಂತಳ = ಶಿವ
ಚಾಮೀಕರ = ಚಿನ್ನ
ಜಾಕಣಿ = ಪಾತ್ರೆಗಳ ಮೇಲೆ ಮುಚ್ಚುವ ಸಾಧನ, ಮುಚ್ಷಳ
ಜಿಕೀರಿ = ಚೌಕಾಸಿ, ಕೊಸರಾಟ
ನಾಂಬ= ಆಲಸ, ಸೋಮಾರಿ
…….. ಹೀಗೆ ಅನೇಕಾನೇಕ ಉದಾಹರಣೆಗಳನ್ನು ಕೊಡಬಹುದು. ಕನ್ನಡದ ನವ್ಯಕಾವ್ಯ ಪ್ರವರ್ತಕರಾದ ಕವಿ ಗೋಪಾಲಕೃಷ್ಣ ಅಡಿಗರು ನಿಘಂಟಿನಿಂದ ಪ್ರತಿದಿನ ಒಂದು ಹೊಸ ಪದವನ್ನು ಕಲಿಯುತ್ತಿದ್ದರಂತೆ. ಅದಕ್ಕೆಯೇ ನೋಡಿ, ಅವರ ಕಾವ್ಯದಲ್ಲಿ ಬಹಳಷ್ಟು ಅಪರೂಪದ ಪದಗಳು ಬಳಕೆಯಾಗುತ್ತವೆ. ಇಂಥವರು ನಮಗೆ ಮಾದರಿ ಆಗಬೇಕು.
ಒಟ್ಟಿನಲ್ಲಿ ನಮ್ಮ ನಿಘಂಟುಗಳೆಂದರೆ ನಾವು ಇನ್ನೂ ಪೂರ್ತಿಯಾಗಿ ತೆರೆದು ನೋಡಿರದ ಖಜಾನೆಗಳು ಅಂದರೆ ಉತ್ಪ್ರೇಕ್ಷೆಯಲ್ಲ.