ಗ್ರೆಂಝ್ ರೇ – ಗ್ರೆಂಝ್ ಅಥವಾ ಅಂಚಿನ ಕಿರಣ – ಕ್ಷ-ಕಿರಣಗಳ ಉದ್ದ ತರಂಗಾಂತರ ಪ್ರದೇಶದಲ್ಲಿ ಉತ್ಪತ್ತಿಯಾಗುವ ಒಂದು ರೀತಿಯ ಕಿರಣಗಳಿವು. 1 ರಿಂದ 10 ಆಂಗ್ ಸ್ಟ್ರಾಮ್ ತರಂಗಾಂತರವನ್ನು ಹೊಂದಿರುತ್ತವೆ. ಇವುಗಳ ಜೀವಶಾಸ್ತ್ರೀಯ ಪರಿಣಾಮವು ಅತಿನೇರಳೆ ಕಿರಣಗಳು ಹಾಗೂ ಸಾಂಪ್ರದಾಯಿಕ ಕ್ಷ-ಕಿರಣಗಳು – ಈ ಎರಡರ ನಡುವಿನ ಪ್ರದೇಶದ ಗುಣಗಳನ್ನು ಹೊಂದಿದ್ದರಿಂದ ಇವುಗಳನ್ನು ಗ್ರೆಂಝ್ (ಜರ್ಮನ್ ಭಾಷೆಯಲ್ಲಿ ಗ್ರೆಂಝ್ ಎಂದರೆ ಅಂಚು ಎಂದು ಅರ್ಥ) ಕಿರಣ ಅಥವಾ ಅಂಚಿನ ಕಿರಣ ಎಂದು ಕರೆಯುತ್ತಾರೆ. ಗುಸ್ತಾವ್ ಪೀಟರ್ ಬಕ್ಕಿ (1880-1963) ಎಂಬ ಜರ್ಮನ್- ಅಮೇರಿಕಾ ಕ್ಷ-ಕಿರಣ ತಜ್ಞರು ಇವುಗಳನ್ನು ಕಂಡುಹಿಡಿದ ಕಾರಣ ಇವುಗಳನ್ನು ಬಕ್ಕಿ ಕಿರಣಗಳು ಎಂದು ಸಹ ಕರೆಯುತ್ತಾರೆ.