ನಾವು ವ್ಯವಹಾರ ಪ್ರಪಂಚದಲ್ಲಿ ಬಳಸುವ ಕ್ರಿಶ್ಚಿಯನ್ ಕ್ಯಾಲೆಂಡರ್ ನಲ್ಲಿ ಜನವರಿ ಮೊದಲು ತಿಂಗಳು ತಾನೆ. ಈ ತಿಂಗಳಲ್ಲಿ ಎಲ್ಲರೂ ಹೊಸ ಕ್ಯಾಲೆಂಡರ್ ಕೊಳ್ಳುವುದರಲ್ಲಿ ಉದ್ಯುಕ್ತರಾಗ್ತಾರೆ. ಸರ್ಕಾರ, ವಿವಿಧ ಸಂಸ್ಥೆಗಳು, ವ್ಯಾಪಾರಕೇಂದ್ರಗಳು ತಮ್ಮ ತಮ್ಮ ಕ್ಯಾಲೆಂಡರ್ ಗಳನ್ನು ಮುದ್ರಿಸುತ್ತಾರೆ, ನಾವು ನಮಗೆ ಹೊಂದುವಂಥದನ್ನು ಕೊಂಡು ವರ್ಷವಿಡೀ ಬಳಸುತ್ತೇವೆ. 

ಸರಿ, ಅನೇಕ ಕನ್ನಡ ಅಧ್ಯಾಪಕರಂತೆ ನನ್ನನ್ನೂ ಕಾಡಿದ ಒಂದು ಪ್ರಶ್ನೆ ಅಂದರೆ ‘ಕ್ಯಾಲೆಂಡರ್ ಗೆ ಕನ್ನಡ ಪದ ಏನು? ‘ ಎಂಬುದು. ನಿಘಂಟಿನಲ್ಲಿ ನೋಡಿದರೆ ಪಂಚಾಂಗ ಎಂಬ ಪದ ಸಿಕ್ಕುತ್ತೆ. ಆದರೆ ಪಂಚಾಂಗ ಅನ್ನುವ ಪದವನ್ನು ಬಳಸಲು ಹೋದರೆ ‘ಪ್ರತಿದಿನದ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳನ್ನು ತಿಳಿಸುವ ಹೊತ್ತಿಗೆ’ ಎಂಬ ಹಿಂದೂ ಧರ್ಮದ ಸಾಂಪ್ರದಾಯಿಕ ಹಿನ್ನೆಲೆಯ ಅರ್ಥ ಮನಸ್ಸಿಗೆ ಬರುತ್ತದೆಯೇ ಹೊರತು, ನಾವು ನಮ್ಮ ಮನೆ/ಕಛೇರಿಗಳಲ್ಲಿ ನೇತು ಹಾಕುವ, ದಿನ-ವಾರ-ತಿಂಗಳ ಮಾಹಿತಿಗಾಗಿ ಆಗಾಗ ತಿರುಗಿಸಿ ನೋಡುವ ಹಾಳೆ ಅಥವಾ ಹಾಳೆಯ ಕಟ್ಟು ನೆನಪಿಗೆ ಬರುವುದಿಲ್ಲ. 

ಕ್ಯಾಲೆಂಡರ್ ಎಂಬ ಪದಕ್ಕೆ ಮೂಲ ಅಂದರೆ ಹಳೆಯ ಫ್ರೆಂಚ್ ಭಾಷೆಯ Calendier (ಅರ್ಥ – ಪಟ್ಟಿ, ದಾಖಲೆ ಪುಸ್ತಕ) ಮತ್ತು ಲ್ಯಾಟಿನ್ ಭಾಷೆಯ calendae (ಅರ್ಥ – ರೋಮನ್ ತಿಂಗಳ ಮೊದಲ ದಿನ, ಸಾಲ ತೀರಿಸಬೇಕಾದ  ಹಾಗೂ ಲೆಕ್ಕಪತ್ರ ದಾಖಲೆಗಳನ್ನು ತೆರೆದು ಲೆಕ್ಕಾಚಾರ ಮಾಡುವ ದಿನ)  ಎಂಬ ಪದಗಳಂತೆ.

 ಇರಲಿ‌. ನಮಗೆ ಕನ್ನಡಿಗರಿಗೆ ದಿನದಿನ ಬಳಸುವ ವಸ್ತುವೊಂದಕ್ಕೆ ಒಂದು ಕನ್ನಡ ಪದವೇ ಇಲ್ಲ ಅಂದರೆ ಹೇಗೆ? ಒಂದು ಪದವನ್ನು ಹುಡುಕಿಕೊಳ್ಳೋಣವೇ ಮತ್ತೆ? ಕ್ಯಾಲೆಂಡರ್ ಎಂಬ ಪದಕ್ಕೆ ಬದಲಾಗಿ ‘ದಿನದರ್ಶಿ’ ಅಥವಾ ‘ದಿನಸೂಚಿ’ ಎಂಬ ಪದವನ್ನು ಬಳಸಬಹುದೇ?  ‘ದಿನದರ್ಶಿ’ ಎಂಬ ಪದವನ್ನು ಬಹಳ‌ ಹಿಂದೆ ಎಲ್ಲೋ ಓದಿದ ನೆನಪು ನನಗೆ. ಈ ಪದ ಅಥವಾ ‘ದಿನಸೂಚಿ’ ಎಂಬ ಪದ ಸರಿಯಾಗಬಹುದು ಅನ್ಸುತ್ತೆ. ನಿಮ್ಮ ಅಭಿಪ್ರಾಯ ತಿಳಿಸಿ ಕನ್ನಡ ಬಂಧುಗಳೇ.