ಪದಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ ಎಂಬುದು ಭಾಷಾ ಕುತೂಹಲಿಗಳಿಗೆ ಗೊತ್ತಿರುವ ವಿಷಯವೇ ಆಗಿದೆ. ಉದಾಹರಣೆಗೆ ಇರುವೆ, ಅರಸು, ಹತ್ತು, ಹರಿ …… ಇಂತಹ ಪದಗಳಿಗಿರುವ ವಿವಿಧ ಅರ್ಥಗಳು. ಈ ಹಿನ್ನೆಲೆಯಲ್ಲಿ ಸಂಸಾರ ಎಂಬ ಪದವನ್ನು ಗಮನಿಸಬಹುದು.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟಿನಲ್ಲಿ `ಸಂಸಾರ ಎಂಬ ಪದಕ್ಕೆ ಹುಟ್ಟು, ಜನ್ಮ, ಪರಿವಾರ, ಕುಟುಂಬ, ಹೆಂಡತಿ, ಪತ್ನಿ, ಲೌಕಿಕ ಜೀವನ, ಬದುಕು, ಪ್ರಪಂಚ, ಜಗತ್ತು ಇಷ್ಟು ಅರ್ಥಗಳನ್ನು ಕೊಟ್ಟಿದ್ದಾರೆ! ಈ ಪದ ಸಂಸ್ಕೃತ/ಪಾಲಿ ಭಾಷಾ ಮೂಲದ್ದು. ಅಲ್ಲಿ ಸಂಸಾರ್ ಎಂದು ಇದ್ದದ್ದು ಕನ್ನಡದಲ್ಲಿ ಸಂಸಾರ ಆಗಿದೆ. ಭಾರತೀಯ ತತ್ವಶಾಸ್ತ್ರದಲ್ಲಿ ಸಂಸಾರ ಎಂದರೆ ಸುತ್ತಲೂ ಹರಿಯುವುದು, ಪ್ರಪಂಚ, `ಆತ್ಮವು ಕರ್ಮಗಳ ಚಕ್ರದಲ್ಲಿ ಸಿಕ್ಕಿಕೊಳ್ಳುವುದು ಎಂಬ ಅರ್ಥಗಳಿವೆ.
`ಸಂಸಾರ ಸಾರೋದಯ ಎಂಬುದು ನಮ್ಮ ಆದಿಕವಿ ಪಂಪನಿಗಿದ್ದ ಒಂದು ಬಿರುದು. ಈ ಬಿರುದಿನ ಅರ್ಥವೇನೆಂದರೆ `ಸಂಸಾರದಲ್ಲಿದ್ದರೂ ಧರ್ಮವನ್ನು ಎಡಬಿಡದೆ ಪಾಲಿಸಿದವನು ಎಂದು.
“ಸಂಸಾರ ಸಾಗರದ ತೆರೆ ಕೊಬ್ಬಿ ಮುಖದ ಮೇಲೆ ಅಲೆವುತ್ತಿದೆ ನೋಡಾ!
ಸಂಸಾರ ಸಾಗರ ಉರದುದ್ದವೇ ಹೇಳಾ?
ಸಂಸಾರ ಸಾಗರ ಕೊರಲುದ್ದವೇ ಹೇಳಾ?
ಸಂಸಾರ ಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ? ಅಯ್ಯ, ಅಯ್ಯ ಎನ್ನ ಹುಯ್ಯಲ ಕೇಳಯ್ಯ. ಕೂಡಲಸಂಗಮ ದೇವ ನಾನೇವೆನೇವೇನಯ್ಯ!
ಎಂದು ಮೊರೆಯಿಟ್ಟಿದ್ದಾರೆ ಬಸವಣ್ಣನವರು ತಮ್ಮ ಒಂದು ಪ್ರಸಿದ್ಧ ವಚನದಲ್ಲಿ.
“ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ, ನಾ ಬಲ್ಲೆ ನನಗೆ ತಿಳಿಯದಿದ್ದರೂ ಎಲ್ಲಿ ಅಚೆಯಾ ದಂಡಿಎಂದಿದ್ದಾರೆ ಬೇಂದ್ರೆ, ಅವರ `ನೀ ಹೀಂಗ ನೋಡಬ್ಯಾಡ ನನ್ನ ಎಂಬ ಪ್ರಸಿದ್ಧ ಕವನದಲ್ಲಿ. ಇನ್ನು ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ “ಒಮ್ಮೆ ಸಂಸಾರದಲಿ ಮತ್ತೊಮ್ಮೆ ಮೌನದಲಿ ಬ್ರಹ್ಮಾನುಭವಿಯಾಗು ಮಂಕುತಿಮ್ಮಎಂದಿದ್ದಾರೆ.
“ಅಪಾರೇ ಕಾವ್ಯಸಂಸಾರೇ ಕವಿರೇವ ಪ್ರಜಾಪತಿಃ ಎಂದಿದ್ದಾನೆ `ಧ್ವನ್ಯಾಲೋಕ ಕೃತಿಯ ಕರ್ತೃ, ಕಾವ್ಯಮೀಮಾಂಸಕ ಆನಂದವರ್ಧನ. ಅಪಾರವಾದ ಕಾವ್ಯಸಂಸಾರದಲ್ಲಿ ಕವಿಯೇ ಹೊಸಹೊಸದನ್ನು ಸೃಷ್ಟಿಸುವ ಬ್ರಹ್ಮ ಎಂಬುದು ಈ ಮಾತಿನ ಅರ್ಥ.
ಸಂನ್ಯಾಸಿಗಳು ತಮ್ಮನ್ನು ತಾವು ಲೋಕಸಂಸಾರಿಗಳು ಎಂದು ಕರೆದುಕೊಳ್ಳುತ್ತಾರೆ. ಆದರೆ `ಸಂಸಾರವಂದಿಗರೋ “ತಿಂಗಳ ಸಂಬಳದಲ್ಲಿ ಸಂಸಾರ ಸಾಗಿಸೋದು ಎಷ್ಟು ಕಷ್ಟ ಗೊತ್ತಾ? ಏನ್ ಮಾಡಕ್ಕಾಗುತ್ತೆ ಸ್ವಾಮಿ!೧….. ಸಂಸಾರ ತಾಪತ್ರಯ!! ಅದು ಯಾರಿಗಿಲ್ಲ ಹೇಳಿ ಸ್ವಾಮಿ! ಎನ್ನುತ್ತಾರೆ.
“ಇವ್ಳನ್ನ ನೋಡಿದ್ರೆ ನಮ್ ಹುಡುಗನ್ ಜೊತೆ ಸಂಸಾರಾನೇ ಶುರು ಮಾಡಿದ ಹಾಗೆ ಕಾಣ್ಸುತ್ತೆ! (ದಾಂಪತ್ಯ ಅನ್ನುವ ಅರ್ಥದಲ್ಲಿ) ಎಂದು ಜೋರಿನ ಸ್ವಭಾವದ ಪ್ರೇಮಿಕೆಯನ್ನು ಜನ ಬಯ್ದುಕೊಳ್ಳುವುದಿದೆ! “ಇವ್ರು ನಮ್ಮ ಸಂಸಾರ ಸಾರ್ ಎಂದು ಹೆಂಡತಿಯನ್ನು ಪರಿಚಯ ಮಾಡಿಕೊಡುತ್ತಾರೆ. ಹಿಂದಿನ ತಲೆಮಾರುಗಳಲ್ಲಿ ಈ ಪದಪ್ರಯೋಗ ಹೆಚ್ಚಾಗಿ ಇತ್ತು.
ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಸನ್‌ಸಾರ್ ಎಂದು ಈ ಪದವನ್ನು ಉಚ್ಚರಿಸುತ್ತಾರೆ. ಲೋಕ ಮತ್ತು ಕುಟುಂಬ ಎಂಬ ಎರಡೂ ಅರ್ಥಗಳಲ್ಲಿ ಇದನ್ನು ಬಳಸುತ್ತಾರೆ. ಕೊಂಕಣಿಯಲ್ಲಿ ಸಂವ್‌ಸಾರ್ ಎಂದು ಉಚ್ಚರಿಸಿದರೂ ಅರ್ಥ ಹಿಂದಿ ಮತ್ತು ಉರ್ದುಗಳಲ್ಲಿ ಇರುವಂತೆಯೇ ಇರುತ್ತದೆ.
ತೆಲುಗು(ಸಂಸಾರಮು), ತಮಿಳು(ಸಂಸಾರಂ), ಮರಾಠಿ(ಸಂಸಾರ್), ಲಂಬಾಣಿ(ಸಂಸಾರ) ಭಾಷೆಗಳಲ್ಲಿ ಕನ್ನಡದಲ್ಲಿ ಬಳಸುವ ಅರ್ಥದಲ್ಲೇ ಈ ಪದವನ್ನು ಬಳಸುತ್ತಾರೆ. ಆದರೆ ಮಲಯಾಳಂ ಭಾಷೆಯಲ್ಲಿ ಸಂಸಾರಿಕ್ಯು ಎಂದರೆ ಸಂಭಾಷಣೆ ಮಾಡುವುದು ಎಂದು ಅರ್ಥ!
“ನಮ್ಮ ಸಂಸಾರ ಆನಂದ ಸಾಗರ, ಪ್ರೀತಿಯೆಂಬ ದೈವವೇ ನಮಗಾಧಾರ ಎಂಬುದು ಕನ್ನಡ ಭಾಷೆಯ ಒಂದು ಸುವಿಖ್ಯಾತ ಸಿನಿಮಾ ಹಾಡು. ಇಲ್ಲಿ ಸಂಸಾರ ಎಂಬ ಪದ ಕುಟುಂಬ ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಒಂದು ಕನ್ನಡ ಸಿನಿಮಾದ ಹೆಸರೇ `ಗಲಾಟೆ ಸಂಸಾರ ಎಂದು!
ಹೀಗೆ ಸಂಸಾರ ಎಂಬ ಪದ ಕನ್ನಡದಲ್ಲಿ ಮತ್ತು ಎಲ್ಲ ಭಾರತೀಯ ಭಾಷೆಗಳಲ್ಲಿ ಬಹುವಾಗಿ ಬಳಕೆಯಾಗುವ ಪದಗಳಲ್ಲಿ ಒಂದು ಅನ್ನಿಸುತ್ತದೆ.