ನಾನು ವಾಸಿಸುವ ಬೆಂಗಳೂರು ನಗರದ ಬಡಾವಣೆಯಾದ ಹಂಪಿನಗರದಲ್ಲಿಮೊನ್ನೆ, ಮನೆಸಾಮಾನು ತರಲೆಂದು ಅಂಗಡಿಗೆ ಹೋಗಿದ್ದಾಗ ಒಂದು ಪ್ರಕಟಣಾ ಫಲಕ ನನ್ನ ಕಣ್ಣಿಗೆ ಬಿತ್ತು. “ಇಲ್ಲಿ ಕಬ್ಬಿನ ಜ್ಯೂಸ್ ದೊರೆಯುತ್ತದೆ” ಎಂದು ಸಾರುತ್ತಿದ್ದ ಫಲಕವದು. ನೋಡಿದರೆ ಅದು ಒಂದು ಕಬ್ಬಿನ ಹಾಲಿನ ಅಂಗಡಿಯಾಗಿತ್ತು. ಅಲ್ಲೇ ಪಕ್ಕದಲ್ಲಿ ಇದ್ದ ಇನ್ನೊಂದು ಫಲಕದಲ್ಲಿ ‘Sugar cane juice available’ ಎಂಬ ಪ್ರಕಟಣೆ ಇತ್ತು. ಅಂದರೆ ಇದರ ಅರ್ಥ ನಮ್ಮ ಬೆಂಗಳೂರು ಕನ್ನಡ ‘ಕಂಗ್ಲಿಷ್’ ಆಗಿಬಿಟ್ಟು ಬಹಳ ದಿನವಾಗಿದೆ ಎಂದು!
ಕಾಲಾಂತರದಿಂದ ನಾವು ಕನ್ನಡಿಗರು ಕಬ್ಬನ್ನು ಹಿಂಡಿ ತೆಗೆಯುವ ರಸಕ್ಕೆ ‘ಕಬ್ಬಿನ ಹಾಲು’ ಎಂಬ ಪದವನ್ನೇ ಬಳಸಿಕೊಂಡು ಬಂದಿದ್ದೇವೆ ತಾನೆ. ಇದೇ ನಮಗೆ ಕೇಳಲು, ಓದಲು ಇಷ್ಟ. ಆದರೆ ಸಮಕಾಲೀನ ವ್ಯಾಪಾರಿಗಳು ಕನ್ನಡ ಭಾಷೆಯಲ್ಲಿ ಬಹುವಾಗಿ ಇಂಗ್ಲಿಷ್ ಬಳಕೆ ಮಾಡುತ್ತಾ, ಮಾಡುತ್ತಾ ರೂಢಿಗತ ಕನ್ನಡ ಪದಗಳ ಬಳಕೆಯನ್ನು ಬಿಟ್ಟುಕೊಡುತ್ತಾರೆ. ಇದನ್ನು ನೋಡುವಾಗ ಬೇಸರ ಅನ್ನಿಸುತ್ತದೆ.
ಝಣಝಣ ಕಾಂಚಾಣದ ಶ್ರೀಮಂತಿಕೆಯೇ ಗಟ್ಟಿದನಿಯಲ್ಲಿ ಮಾತಾಡುವಾಗ ಭಾಷೆಯ ಶ್ರೀಮಂತಿಕೆಯನ್ನು ಕುರಿತು ಯೋಚಿಸುವ ಜನ ಕಡಿಮೆ ಆಗುತ್ತಿದ್ದಾರೆಯೇ?