ನಮ್ಮ ತಾಯಿಯವರು ಉಡುಪಿ ಮೂಲದವರಾಗಿದ್ದು ಕೊಡಗಿನಲ್ಲಿ ಬೆಳೆದವರು. ಅವರು ಅಡಿಗೆ, ಊಟಗಳ ಬಗ್ಗೆ ಮಾತಾಡುವಾಗ ‘ಒಳ್ಳೆ ಮೆಣಸು’ ಎಂಬ ಪದವನ್ನು ಸಹಜವಾಗಿ ಬಳಸುತ್ತಿದ್ದರು. ಅವರು ಆ ಪದ ಬಳಸುತ್ತಿದ್ದುದು ಕರಿಮೆಣಸು/ಕಾಳು ಮೆಣಸು ಅಥವಾ ಮೆಣಸಿನ ಕಾಳು ಎಂಬ ಪದಕ್ಕೆ ಸಂವಾದಿಯಾಗಿ(ಪೆಪ್ಪರ್). ಕನ್ನಡ ಮಾತಾಡುವ ಎಲ್ಲ ಮನೆಗಳಲ್ಲೂ ಒಳ್ಳೆ ಮೆಣಸು ಎಂಬ ಈ ಪದ ಬಳಕೆಯಲ್ಲಿದೆಯೇ ಎಂಬ ಕುತೂಹಲ ನನಗೆ. ಆದರೆ ಈ ಪದವನ್ನು ಜನ ಅಷ್ಟಾಗಿ ಬಳಸುವುದಿಲ್ಲವೇನೋ.
ಒಂದು ಮಸಾಲಾ ಪದಾರ್ಥದ ಹೆಸರಿನ ಹಿಂದೆ ಈ ‘ಒಳ್ಳೆ’ ಎಂಬ ಪೂರ್ವಪದ ಸೇರಿದ್ದು ಹೇಗೆ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಹುಟ್ಟಿತು.
ನನ್ನ ತಾಯಿಯ ತಂದೆಯವರು ಅಂದರೆ ನನ್ನ ತಾತ ಆಯುರ್ವೇದ ಮತ್ತು ಮನೆಮದ್ದುಗಳಲ್ಲಿ ಪರಿಣತರಾಗಿದ್ದರು. ಅವರು, ತಾವು ತಯಾರು ಮಾಡುತ್ತಿದ್ದ ಔಷಧಗಳಲ್ಲಿ ಬಹುವಾಗಿ ಕಾಳು ಮೆಣಸಿನ ಉಪಯೋಗ ಮಾಡುತ್ತಿದ್ದರೇ ಹೊರತು, ಹಸಿ ಮೆಣಸಿನಕಾಯಿ-ಒಣಮೆಣಸಿನ ಕಾಯಿಗಳನ್ನು ಬಳಸುತ್ತಿರಲಿಲ್ಲ. ಹಸಿ-ಒಣ ಮೆಣಸಿನಕಾಯಿಗಳ ಹೆಚ್ಚಿನ ಪ್ರಮಾಣದ ಬಳಕೆಯು ಹೊಟ್ಟೆ ಉರಿ, ಹೊಟ್ಟೆನೋವನ್ನು ಉಂಟು ಮಾಡುತ್ತದೆ. ಆದರೆ, ಔಷಧೀಯ ಗುಣಗಳನ್ನು ಹೊಂದಿದ್ದು, ಕ್ರಿಮಿಗಳನ್ನು ದೂರ ಇಡುವ ಶಕ್ತಿಯುಳ್ಳ ಕಾಳು ಮೆಣಸು, ಕಷಾಯ ತಯಾರಿಸುವುದರಿಂದ ಹಿಡಿದು ದೇವರಿಗೆ ಮುಡಿಪು ಕಟ್ಟುವ ತನಕ ಅನೇಕ ‘ಒಳ್ಳೆಯ’ ರೀತಿಗಳಲ್ಲಿ ಉಪಯೋಗಕ್ಕೆ ಬರುತ್ತಿತ್ತು. ಹೀಗಾಗಿ ‘ಒಳ್ಳೆ ಮೆಣಸು’ ಎಂಬ ಪದ ಬಳಕೆಗೆ ಬಂದಿರಬಹುದು ಅನ್ನಿಸುತ್ತೆ.
ಅಂತೂ ‘ಒಳ್ಳೆ’ ಮೆಣಸಿನ ಹೆಸರಿನ ವೃತ್ತಾಂತ ಒಳ್ಳೆ ಚೆನ್ನಾಗಿದೆ ಅಲ್ವಾ?
Like us!
Follow us!