ಅಂತರ್ಜಾಲ ಆಧಾರಿತ ಇಂದಿನ ಕಾರ್ಯಪ್ರಪಂಚದಲ್ಲಿ ನಾವು ಬಹಳವಾಗಿ ಬಳಸುವ ಎರಡು ಪದಗಳು – ಅಪ್ಲೋಡ್ ಹಾಗೂ ಡೌನ್ಲೋಡ್. ಒಂದು ನಿರ್ದಿಷ್ಟ ದಾಖಲೆ, ಬರವಣಿಗೆ, ಚಿತ್ರವನ್ನು ಯಾವುದಾದರೂ ಅಂತರ್ಜಾಲ ತಾಣಕ್ಕೆ ಏರಿಸುವುದು, ಸೇರಿಸುವುದು ‘ಅಪ್ಲೋಡ್’ ಅನ್ನಿಸಿಕೊಳ್ಳುತ್ತೆ. ಅಲ್ಲವೆ? ಈ ಪದಕ್ಕೆ ‘ಮೇಲ್ಸಲ್ಲಿಕೆ’ ಎಂಬ ಕನ್ನಡ ಪದ ಸೂಕ್ತವಾಗಬಹುದೆ?
‘ಮೇಲ್ಸಲ್ಲಿಕೆ’ ಪದವನ್ನು ನಾನು ಕೆಲವು ಸಲ ಬಳಸುವ ಪ್ರಯತ್ನ ಮಾಡಿದ್ದೇನೆ. ಹಾಗೆಯೇ ಯಾವುದಾದರೂ ಜಾಲತಾಣದಿಂದ ಅಥವಾ ಮಿಂಚಂಚೆ ವಿಳಾಸದಿಂದ ಒಂದು ನಿರ್ದಿಷ್ಟ ದಾಖಲೆ, ಬರವಣಿಗೆ ಅಥವಾ ಚಿತ್ರವನ್ನು ನಮ್ಮ ಗಣಕಯಂತ್ರ ಅಥವಾ ಚಲನವಾಣಿಗೆ ಸಲ್ಲಿಸಿಕೊಳ್ಳುವುದು ಅಥವಾ ಇಳಿಸಿಕೊಳ್ಳುವುದು ‘ಡೌನ್ಲೋಡ್’ ಅಲ್ಲವೆ? ಇದಕ್ಕೆ ಯಾವ ಬಳಸಬಹುದು ಎಂದು ನಾನು ಈಚೆಗೆ, ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷರೂ, ಚಿಂತಕರೂ, ವಾಗ್ಮಿಯೂ, ನಿವೃತ್ತ ಕನ್ನಡ ಪ್ರಾಧ್ಯಾಪಕರೂ, ತಮ್ಮ ಮಾತು ಸದಾ ಗರಿಷ್ಠ ಕನ್ನಡವಾಗುವ ಸಂಕಲ್ಪ ತೊಟ್ಟವರೂ ಆದ ಡಾ.ಭೈರಮಂಗಲ ರಾಮೇಗೌಡ ಅವರೊಂದಿಗೆ ಮಾತಾಡುತ್ತಿದ್ದಾಗ, ಆ ಚರ್ಚೆಯಲ್ಲಿ ಡೌನ್ಲೋಡ್ ಪದಕ್ಕೆ ‘ಕೆಳಸಲ್ಲಿಕೆ’ ಪದ ಬಳಸಬಹುದೆಂಬ ತಮ್ಮ ಅನಿಸಿಕೆಯನ್ನು ಅವರು ಹೇಳಿದರು. ನನಗೂ ‘ಹೌದಲ್ಲ’ ಅನ್ನಿಸಿತು.
ಏನನ್ನುವಿರಿ ಕನ್ನಡ ಬಂಧುಗಳೇ?ಅಪ್ಲೋಡ್ ಗೆ ‘ಮೇಲ್ಸಲ್ಲಿಕೆ’ ಮತ್ತು ಡೌನ್ಲೋಡ್ ಗೆ ‘ಕೆಳಸಲ್ಲಿಕೆ’ – ಈ ಕನ್ನಡ ಸಂವಾದಿ ಪದಗಳನ್ನು ಬಳಸೋಣವೆ? ನಿಮ್ಮ ಅನಿಸಿಕೆ ತಿಳಿಸುತ್ತೀರಲ್ಲ?