ನಾನು ಸದ್ಯದಲ್ಲಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಒಂದು ಭಾಗವಾದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ, ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ವೃತ್ತಿಯ ಭಾಗವಾಗಿ ನಾನು ನನ್ನ ವಿದ್ಯಾರ್ಥಿನಿಯರೊಂದಿಗೆ, ಆದಷ್ಟೂ ಕನ್ನಡ ಪದಗಳನ್ನು ಬಳಸಿ ಮಾತಾಡುವ ಪ್ರಯತ್ನದಲ್ಲಿ ತೊಡಗಿರುತ್ತೇನೆ. ಬೆಂಗಳೂರಿಗರು ವ್ಯಾಪಕವಾಗಿ ಬಳಸುವ `ಕಂಗ್ಲೀಷನ್ನು'(ಅಂದರೆ, ಕನ್ನಡ ಇಂಗ್ಲಿಷ್ ಸೇರಿದ ಕನ್ನಡದ ಒಂದು ಭಾಷಾರೂಪವನ್ನು) ಕಡಿಮೆ ಬಳಸಬೇಕು ಎಂಬ ಉದ್ದೇಶವು ಸಹ ಇದರ ಹಿಂದೆ ಇದೆ ಅನ್ನಿ. ಹೀಗಾಗಿ, ಕೆಲಸದ ಸ್ಥಳದಲ್ಲಿನ ನನ್ನ ಮಾತುಗಳಲ್ಲಿ `ನಮಸ್ತೆ, ತರಗತಿ, ವೇಳಾಪಟ್ಟಿ, ಸಮಯ, ತುರ್ತು, ಆಂತರಿಕ ಮೌಲ್ಯಮಾಪನ, ನಿಯೋಜಿತ ಕಾರ್ಯ, ಕಿರುಪರೀಕ್ಷೆ, ಗಂಟೆ, ಧನ್ಯವಾದ, ಪ್ರಶ್ನೆ, ಉತ್ತರ’ ಮುಂತಾದ ಕನ್ನಡ ಪದಗಳು ಹೆಚ್ಚಾಗಿ ಕೇಳಿಸುತ್ತಿರುತ್ತವೆ ಎಂಬುದು, ನನ್ನೊಂದಿಗೆ ಒಡನಾಡುವವರ ಅನಿಸಿಕೆಯಾಗಿದೆ. ಪದವಿ ತರಗತಿಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವ ವಿದ್ಯಾರ್ಥಿನಿಯರಿಗೆ ಕನ್ನಡ ಪದಗಳ ಪರಿಚಯ ಹೆಚ್ಚು ಹೆಚ್ಚು ಆಗಲಿ ಎಂಬ ಉದ್ದೇಶ ನನ್ನದು.

ನನ್ನ `ಕನ್ನಡ ಬಳಕೆಯ ಪ್ರಯತ್ನ’ದ ಭಾಗವಾಗಿ ತರಗತಿಯಲ್ಲಿ ಮತ್ತು ಕನ್ನಡ ವಿಭಾಗದಲ್ಲಿ ವಿದ್ಯಾರ್ಥಿನಿಯರು ಕೂಡ ಕನ್ನಡ ಪದ ಬಳಸುವಂತೆ ಪ್ರೋತ್ಸಾಹಿಸುತ್ತಾ, ಕೆಲವೊಮ್ಮೆ ಅನುನಯದಲ್ಲೇ ತುಸು ಬಲವಂತಿಸುತ್ತಾ(!) ಇರುತ್ತೇನೆ. ಕನ್ನಡ ಅಧ್ಯಾಪಕರ ಮಟ್ಟಿಗೆ ಇದು ಅಂತಹ ವಿಶೇಷ ವಿಷಯವೇನೂ ಅಲ್ಲವಾದರೂ ಕೆಲವೊಮ್ಮೆ ನನಗೆ ಇದರಿಂದ ವಿಚಿತ್ರ ಅನುಭವಗಳಾಗಿರುವುದುಂಟು!

ಒಮ್ಮೆ ವಿದ್ಯಾರ್ಥಿನಿಯೊಬ್ಬಳು ಅವಳ ದಾಖಲೆಗಳ ದೃಢೀಕರಣಕ್ಕಾಗಿ ನಮ್ಮ ವಿಭಾಗಕ್ಕೆ (ಕಾಲೇಜಿನಲ್ಲಿ ಅಧ್ಯಾಪಕರು ಕುಳಿತುಕೊಳ್ಳುವ ಕೊಠಡಿಗೆ) ಬಂದಿದ್ದಳು. ಆ ದೃಢೀಕರಣ ಮಾಡುವ ಸಂದರ್ಭದಲ್ಲಿ ಅವಳ ಗುರುತಿನ ಚೀಟಿಯ ಸಂಖ್ಯೆಯನ್ನು ದಾಖಲಿಸಿಕೊಳ್ಳವುದಿತ್ತು. ನಮ್ಮಲ್ಲಿ ವಿದ್ಯಾರ್ಥಿನಿಯರು ಗುರುತಿನ ಚೀಟಿಗೆ `ಐಡಿ’ (ಇಂಗ್ಲಿಷ್ ಪದ ಐಡೆಂಟಿಟಿ ಕಾರ್ಡ್‌ನ ಕಿರುರೂಪ) ಎಂದು ಕರೆಯುತ್ತಾರೆ, ಮತ್ತು ಯಾವಾಗಲೂ ಅದನ್ನು ತಮ್ಮ ಕುತ್ತಿಗೆಗೆ ಅರ್ಧ ಇಂಚಿನಷ್ಟು ಅಗಲವಾದ ದಾರವೊಂದರಿಂದ ತೂಗು ಹಾಕಿಕೊಂಡಿರುತ್ತಾರೆ. ನಾನು ಈ ಹುಡುಗಿಗೆ “ನಿನ್ನ ಗುರುತಿನ ಚೀಟಿ ಕೊಡಮ್ಮ” ಅಂದೆ. ಅವಳು ಗಾಬರಿಯಿಂದ “ಅದು ಇಲ್ಲ ಮ್ಯಾಮ್” ಅಂದಳು. ಪಾಪ, ಅದು ಅವಳ ಕುತ್ತಿಗೆಯಲ್ಲೇ ತೂಗುತ್ತಿತ್ತು. ಈ ಘಟನೆಯು ಘಟಿಸುತ್ತಿದ್ದ ನಮ್ಮ ಕೊಠಡಿಯಲ್ಲೇ ಕುಳಿತಿದ್ದ, ಕನ್ನಡವನ್ನು ಚೆನ್ನಾಗಿ ಬಲ್ಲ ಇಂಗ್ಲಿಷ್ ಅಧ್ಯಾಪಕಿಯೊಬ್ಬರು ಮುಗುಳ್ನಗುತ್ತಾ “ಅದು ನಿನ್ನ ಮೈಮೇಲೇ ಇದೆಯಲ್ಲಮ್ಮ!” ಅಂದರು. ಆದರೂ ಆ ಹುಡುಗಿಗೆ ಗುರುತಿನ ಚೀಟಿ ಅಂದರೇನೆಂದು ಗೊತ್ತಾಗಲಿಲ್ಲ. ಏನು ಒತ್ತಡ ಇತ್ತೋ ಏನೋ ಪಾಪ ಅವಳಿಗೆ! ಗಾಬರಿ ಬಿದ್ದು `ಇಲ್ಲ ಮ್ಯಾಮ್, ಇಲ್ಲ ಮ್ಯಾಮ್’ ಅನ್ನಲು ಶುರು ಮಾಡಿದಳು. ಆಗ ನಾನು ಅವಳ ಫಜೀತಿ ನೋಡಲಾರದೆ `ನಿನ್ನ ಐಡಿ ಕಾರ್ಡ್ ಅಲ್ವಾ ಕೇಳಿದ್ದು? ತೋರಿಸಮ್ಮಾ” ಅಂದೆ. “ಅಯ್ಯೋ, ಇದಾ ಮ್ಯಾಮ್!” ಅಂದಳು. ಅವಳಿಗೂ ತುಸು ನಗು ಬಂತು. ಅವಳ ಕೆಲಸ ಮುಗಿದು ಹೊರಡುವಾಗ ಅವಳನ್ನು “ಈಗ ಹೇಳಮ್ಮ, ಐಡಿಗೆ ಕನ್ನಡದಲ್ಲಿ ಏನಂತಾರೆ?” ಎಂದು ಕೇಳಿದೆ. ಮ್ ಮ್ ಎಂದು ತುಸು ತಡವರಿಸಿ `ಗು….ಗು….ಗುರುತು…. ಗುರುತಿನ್ ಚೀಟಿ’ ಅಂದಳು. ನಮ್ಮ ವಿಭಾಗದಲ್ಲಿ ಒಂದು ನಗೆ ಎಳೆಬಿಸಿಲಿನಂತೆ ಪಸರಿಸಿತು.

(ಗುಟ್ಟಿನ ಮಾತು : ನನ್ನ ಇಂತಹ ಅನುಭವಗಳಿಗೆ ಇಂದಿನ ಬೆಂಗಳೂರಿಗರ ಕನ್ನಡ-ಇಂಗ್ಲಿಷ್ ನುಡಿಬೆರಕೆಯ `ಭಾಷಾಭ್ಯಾಸ’ವು ಕಾರಣವಾದಂತೆ, ನನ್ನಲ್ಲಿ `ಕನ್ನಡದ್ದೇ ಪದ ಬಳಕೆ ಮಾಡಬೇಕೆಂಬ’ ಮತ್ತು ಸಾಲದ್ದಕ್ಕೆ ನನ್ನ ವಿದ್ಯಾರ್ಥಿಗಳಿಂದಲೂ ಮಾಡಿಸಬೇಕೆಂಬ `ಹಠಮಾರಿತನ’!? ಮೂಡಿರುವುದೂ ಕಾರಣವಿರಬೇಕು ಅಂತ ನನ್ನ ಕುಟುಂಬ ಸದಸ್ಯರು ಆಗಾಗ ತಮಾಷೆ ಮಾಡುತ್ತಿರುತ್ತಾರೆ. ಅಯ್ಯೋ!)