‘ಅಸೂಯೆ’ ಎಂಬ ಪದಕ್ಕೆ ಹೊಟ್ಟೆಕಿಚ್ಚು, ಹೊಟ್ಟೆಯುರಿ, ಮತ್ಸರ( ಇಂಗ್ಲಿಷ್ ನಲ್ಲಿ jealousy) ಎಂಬ ಸಂವಾದಿ ಪದಗಳಿರುವುದು ನಮಗೆ ಗೊತ್ತಲ್ಲವೆ? ಮೊನ್ನೆ ಒಂದು ಪುಸ್ತಕದ ವಿಷಯಕ್ಕಾಗಿ ನನಗೆ ಕರೆ ಮಾಡಿದ್ದ ಲೇಖಕ ಮಿತ್ರ ಹಾಡ್ಲಹಳ್ಳಿ ನಾಗರಾಜ್ ಅವರು ಮಾತಿನ ಮಧ್ಯೆ ‘ಹೊಟ್ಟೆಕಚ್ಚು’ ಎಂಬ ಪದವನ್ನು ಬಳಸಿದರು‌. ಆ ಪದದ ಬಗ್ಗೆ ಕುತೂಹಲ ಹುಟ್ಟಿ ನಾನು ಅದರ ಅರ್ಥ ಕೇಳಿದಾಗ ‘ಹೊಟ್ಟೆಯಲ್ಲಿ ಜಂತುಹುಳು ಮುಂತಾದ ಹುಳುಗಳ ಬಾಧೆಯಿಂದ ಮಕ್ಕಳು ಹೊಟ್ಟೆನೋವಿಂದ ನರಳುತ್ತಾರಲ್ಲ, ಅದನ್ನು ನಮ್ಮ ಕಡೆ ಹೊಟ್ಟೆಕಚ್ಚು ಅಂತಾರೆ’ ಅಂದರು. ಜೊತೆಗೆ ಹೊಟ್ಟೆಕಚ್ಚು ಆದಾಗ ‘ಕಹಿಜೀರಿಗೆ’ ಎಂಬ ಪದಾರ್ಥವಿಶೇಷವನ್ನು ಬಳಸಿ ಮಾಡುವಂತಹ ಔಷಧದ ಬಗ್ಗೆ ಸಹ ಹೇಳಿದರು. ಇನ್ನೇನು ಪ್ರಕಟಗೊಳ್ಳಲಿರುವ ತಮ್ಮ ಆತ್ಮಕಥೆಯಲ್ಲಿ ‘ಹೊಟ್ಟೆಕಚ್ಚು- ಕಹಿಜೀರಿಗೆ ಪ್ರಸಂಗ’ ಇರುವುದಾಗಿ ತಿಳಿಸಿದರು. ಅಹಾ! ಇದನ್ನು ಕೇಳಿದಾಗ ಅವರ ಆತ್ಮಕಥೆಯನ್ನು ಓದಬೇಕು ಎಂಬ ಕಾತರ ಹುಟ್ಟಿದ್ದು ಮಾತ್ರ ಅಲ್ಲ, ನನಗೆ  ನಮ್ಮ ಕನ್ನಡ ಭಾಷೆಯ ಪದಸಂಪತ್ತಿನ ಬಗ್ಗೆ ಆಶ್ಚರ್ಯ, ಅಭಿಮಾನ  ಕೂಡ ಹೆಚ್ಚಿದವು.