ನಮ್ಮ ಕನ್ನಡ ನಾಡಿನ ಜನಪ್ರಿಯ ಪೇಯ ಕಾಫಿ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ! ನನ್ನದೂ ಸೇರಿ ನಮ್ಮ ನಾಡಿನ ಅನೇಕರ ದಿನ ಪ್ರಾರಂಭವಾಗುವುದೇ ಈ ಮೋಹಕ, ಘಮಘಮ ನಿದ್ರಾಉಚ್ಛಾಟಿನಿಯಿಂದ! ದಕ್ಷಿಣ ಭಾರತದ ಕಾಫಿಸೇವಕರಲ್ಲಿ 31 ಶೇಕಡಾ ಜನರು ಕರ್ನಾಟಕದವರೇ ಅಂತೆ! ಹದಿನೇಳನೆಯ ಶತಮಾನದಲ್ಲಿ ಬಾಬಾ ಬುಡನ್ ಅವರು ಯೆಮನ್ ನಿಂದ ಏಳು ಕಾಫಿಬೀಜಗಳನ್ನು ತಮ್ಮ ಊರುಗೋಲಿನಲ್ಲಿ ಅಡಗಿಸಿಕೊಂಡು ಚಿಕ್ಕಮಗಳೂರಿನಲ್ಲಿ ನೆಟ್ಟಿದ್ದು, ನಂತರ ಕರ್ನಾಟಕವು ಭಾರತದ ಅತಿ ಹೆಚ್ಚು ಕಾಫಿ ಬೆಳೆಯುವ ನಾಡಾಗಿ ಹೆಸರು ಪಡೆದದ್ದು ಇದನ್ನೆಲ್ಲ ಕೇಳಿ ಖುಷಿಪಟ್ಟವರು ತಾನೇ ನಾವೆಲ್ಲ.
ಕಾಫಿಯನ್ನು ಮನೆಯಲ್ಲಿ ಮಾಡಿಕೊಂಡು ಸವಿಯುವುದು ಒಂದು ಖುಷಿ. ವಿಶೇಷ ಕಾಫಿ ಪಾನಾವಳಿಗಳಿಗೆ ಹೋಗಿ ಅದನ್ನು ಸವಿಯುವುದು ಇನ್ನೊಂದು ಖುಷಿ! ಆದರೆ ಕನ್ನಡನಾಡಿನ ಸಭಾ ಸಮಾರಂಭಗಳಲ್ಲಿ ಈ ನಡುವೆ ಕಾಫಿ ಸರಬರಾಜು ಮಾಡುವಾಗ ತಪ್ಪದೆ ಕೇಳಿಬರುವ ಪದಗಳೆಂದರೆ ‘ಲೆಸ್ಸಾ, ಪ್ಲಸ್ಸಾ?’ ಎಂಬ ಜೋಡಿಪದಗಳು! ಇದೇನಪ್ಪಾ ಅಂದಿರೇ? ” ನಿಮ್ಮ ಕಾಫಿಗೆ ಸಕ್ಕರೆ ಬೇಡವಾ, ಬೇಕಾ?” ಎಂಬ ವಾಕ್ಯದ ಬದಲಿಯಾಗಿ ಬಳಸುವ ಪದಗಳಿವು. ಐವತ್ತು-ನೂರು ಜನರಿಗೆ ಛಕಛಕನೆ ಕಾಫಿ ಸರಬರಾಜು ಮಾಡುವ ಚಿಕ್ಕ ವಯಸ್ಸಿನ ಹುಡುಗರು ‘ಲೆಸ್ಸಾ, ಪ್ಲಸ್ಸಾ, ಲೆಸ್ಸಾ, ಪ್ಲಸ್ಸಾ?’ ಎಂದು ಕೇಳುತ್ತಾ ಸಕ್ಕರೆ ಇಲ್ಲದ/ಇರುವ ಕಾಫಿಯನ್ನು ಕೊಡುತ್ತಾ ಹೋಗುತ್ತಾರೆ. ಮಧುಮೇಹ( ಸಕ್ಕರೆ) ಖಾಯಿಲೆ ಇರುವವರು ಕಾಫಿ ಕುಡಿಯುವಾಗ ‘ಶುಗರ್ ಲೆಸ್’ ಪದ ಬಳಸಿ ಬಳಸಿ ಅದು ಈಗ ‘ಲೆಸ್ಸ್’ ಎಂಬ ಸಂಕ್ಷಿಪ್ತ ರೂಪ ಧರಿಸಿಬಿಟ್ಟಿದೆ!
ನಗರಗಳ ಕನ್ನಡದ ಹೊಸ ಚಹರೆಯೊಂದನ್ನು ಈ ಪದಗಳು ಹೇಳುತ್ತವಾದರೂ ನಮ್ಮ ಜನಸಂಖ್ಯೆಯಲ್ಲಿ ಸಕ್ಕರೆ ಖಾಯಿಲೆ ಇರುವವರ ಸಂಖ್ಯೆ ಬಹಳವಾಗಿ ಹೆಚ್ಚುತ್ತಿರುವ ಆತಂಕಕಾರಿ ವಿಷಯವನ್ನೂ ಇದು ಸೂಚಿಸುತ್ತಿದೆ ಅಲ್ಲವೆ?
ಭಾಷೆ ಬದುಕಿನ ಕನ್ನಡಿ ಎಂಬುದಕ್ಕೆ ಮತ್ತೊಂದು ಸಾಕ್ಷಿ ಈ ಪ್ರಸಂಗ.