ಬೆಂಗಳೂರಿನ (ಹಾಗೂ ಬಹುಶಃ ಭಾರತದ ಎಲ್ಲ ನಗರಗಳ) ಎಲ್ಲ‌ ಬಡಾವಣೆಗಳ ಮುಖ್ಯ ರಸ್ತೆಗಳು ಮತ್ತು ಕೆಲವು ಗಲ್ಲಿಗಳಲ್ಲಿ, ‘ಆಲ್ಟ್ರೇಷನ್ ಟೈಲರ್ಸ್’, ‘ಇಲ್ಲಿ  ಎಲ್ಲ ರೀತಿಯ ಆಲ್ಟ್ರೇಷನ್ ಕೆಲಸಗಳನ್ನು ಮಾಡಿ ಕೊಡಲಾಗುತ್ತದೆ’ ಎಂಬ ಫಲಕಗಳನ್ನು ನಾವು  ನೋಡಿರುತ್ತೇವಲ್ಲವೆ? ಈ ಕೆಲಸ ಮಾಡುವವರು ಬಹಳ 

ಚಿಕ್ಕದಾದ ಅಂಗಡಿಗಳಲ್ಲಿ, ಕೆಲವರಂತೂ ರಸ್ತೆಯ ಬದಿಯಲ್ಲಿಯೇ ಒಂದು ಹೊಲಿಗೆ ಯಂತ್ರ ಇಟ್ಟುಕೊಂಡು, ಬಂದಂತಹ ಗಿರಾಕಿಗಳು ತರುವ ದೊಗಲೆ

ಬಟ್ಟೆಗಳನ್ನು ಕತ್ತರಿಸಿ ಹೊಲಿದು ಅವರ ಅಳತೆಗೆ ತಕ್ಕಂತೆ ಸರಿ ಮಾಡಿಕೊಡುತ್ತಿರುತ್ತಾರೆ ಅಥವಾ ಹರಿದು ಹೋಗಿರುವ ಬಟ್ಟೆಗಳನ್ನು ಹೊಲಿದು ಕೊಡುತ್ತಿರುತ್ತಾರೆ.  ಕೆಲಸದ ಪ್ರಮಾಣಕ್ಕೆ ತಕ್ಕಂತೆ 10, 20, 30 ಹೀಗೆ ಚಿಕ್ಕ ಮೊತ್ತ‌ ತೆಗೆದುಕೊಂಡು ದಿನವಿಡೀ ದುಡಿದು ಜೀವನ ಮಾಡುತ್ತಾರೆ. ಈ ಪರಿಶ್ರಮಿ ವ್ಯಕ್ತಿಗಳ ದುಡಿಮೆಯನ್ನು ಗೌರವಿಸುತ್ತಲೇ ಒಂದು ಪ್ರಶ್ನೆಯನ್ನು ನಾನು ಆಗಾಗ ಕೇಳಿಕೊಳ್ಳುತ್ತೇನೆ. ‘ಆಲ್ಟ್ರೇಷನ್ ಟೈಲರ್ಸ್’ ಎಂಬ ಪದಪುಂಜಕ್ಕೆ ಸಂವಾದಿಯಾಗಿ ಕನ್ನಡ ಪದವನ್ನು ಏಕೆ ಬಳಸಿಲ್ಲ? ಎಂಬ ಪ್ರಶ್ನೆ ಅದು.

ಹಳೆಯ ಕಾಲದಲ್ಲಿ ಹರಿದ ಅಂಗಿಯನ್ನು ಹೊಲಿಯುವುದಕ್ಕೆ ‘ತೇಪೆ ಹಾಕುವುದು’, ‘ತೇಪೆ ಹಚ್ಚುವುದು’ ಎಂಬ ಪದಗಳನ್ನು ಬಳಸುತ್ತಿದ್ದರು. ಈಗ ಆಧುನಿಕ ಕಾಲದಲ್ಲಿಈ ಪದ ಬಳಸಲು ಇಷ್ಟ ಇಲ್ಲದೆ ಬಳಸುವುದಿಲ್ಲವೊ – ಏಕೆಂದರೆ ತೇಪೆ ಕೆಲಸ ಎಂಬ ಪದಕ್ಕೆ ಅರ್ಧಂಬರ್ಧ ಕೆಲಸ ಅನ್ನುವ ಅರ್ಥವೂ ಇದೆ – ಅಥವಾ ಸರಿಯಾದ ಅಳತೆ ಇಲ್ಲದ ಬಟ್ಟೆಗಳ‌ ಅಳತೆ ಸರಿ ಮಾಡುವುದು ಸಹ ಇಲ್ಲಿ ಸೇರುವುದರಿಂದ, ತೇಪೆ  ಹಾಕುವುದು/ಹಚ್ಚುವುದು ಎಂಬ ಪದಪ್ರಯೋಗ ಇದನ್ನು ಒಳಗೊಳ್ಳುವುದಿಲ್ಲ‌ ಎಂಬುದಕ್ಕಾಗಿ ಬಳಸುವುದಿಲ್ಲವೊ ಎಂದು ಯೋಚಿಸಿದೆ. ಕನ್ನಡ  ಪ್ರಾಧ್ಯಾಪಕರು, ಪ್ರಾಂಶುಪಾಲರು  ಹಾಗೂ ವಿಮರ್ಶಕರಾದ ಡಾ.ಬಿ.ಸಿ.ನಾಗೇಂದ್ರ ಕುಮಾರ್ ಅವರೊಂದಿಗೆ ಈ ಬಗ್ಗೆ ನಾನು ಚರ್ಚಿಸಿದಾಗ ಅವರು ‘ಬಟ್ಟೆ ರಿಪೇರಿ ಅಂಗಡಿ’ ಎಂದು ಬಳಸಬಹುದಲ್ಲವೆ?’ ಎಂದರು. Repair  ಎಂಬ ಇಂಗ್ಲಿಷ್ ಪದವನ್ನು ನಾವು ಕನ್ನಡಿಗರು ರಿಪೇರಿ ಎಂಬ ರೂಪದಲ್ಲಿ ಕನ್ನಡೀಕರಿಸಿ ಬಳಸುತ್ತಿರುವುದರಿಂದ ಈ ಪದಪ್ರಯೋಗ ಹೊಂದಬಹುದೇನೊ ಅನ್ನಿಸಿತು. ಹೇಗಿದೆ ‘ಬಟ್ಟೆ ರಿಪೇರಿ  ಅಂಗಡಿ’ ಎಂಬ ಪದ?  ‘ಆಲ್ಟ್ರೇಷನ್ ಟೈಲರ್ಸ್’ ಗೆ ಬದಲಾಗಿ ಇದನ್ನು ಬಳಸಬಹುದೆ? ಹೇಳ್ತೀರಲ್ಲವೆ ಕನ್ನಡ ಬಂಧುಗಳೆ?