ಕನ್ನಡ ನಾಡಿನ ಪ್ರಕೃತಿ ಸಿರಿಯಂತೆ ಸಂಸ್ಕೃತಿ ಸಂಪತ್ತು ಸಹ ವೈವಿದ್ಯಮಯವಾದದ್ದು ಹಾಗೂ ಕೌತುಕ ಹುಟ್ಟಿಸುವಂಥದ್ದು.‌ ಇದರಲ್ಲಿ ಅದ್ಭುತವಾದ ಖಾದ್ಯವಿಶೇಷಗಳೂ ಸೇರಿವೆ. ‌ಇವುಗಳಲ್ಲಿ ತುಂಬ ಸರಳವಾದ ಆದರೆ ಅಚ್ಚರಿ ಹುಟ್ಟಿಸುವಂತಹ ಒಂದು ತಿನಿಸು ಅಂದರೆ ಕಲ್ಲನ್ನ.

 ಉತ್ತರ ಕನ್ನಡದ ಸಿರ್ಸಿಯಿಂದ ಶಿವಮೊಗ್ಗದ ತನಕ ಈ ತಿನಿಸು ರೂಢಿಯಲ್ಲಿದೆ. ನದೀತೀರದಲ್ಲಿರುವ ನಿಂಬೆ-ಕಿತ್ತಳೆ ಗಾತ್ರದ ಬೆಣಚು ಕಲ್ಲುಗಳನ್ನು ಮನೆಗೆ ತಂದು, ತೊಳೆದು ಒರೆಸಿ, ಸೌದೆ ಒಲೆಯೊಳಗೆ ಹಾಕಿ ಅವುಗಳನ್ನು ಕೆಂಪಗೆ ಕಾಯಿಸುತ್ತಾರಂತೆ. ನಂತರ ಬಾಳೆ ಎಲೆ ಅಥವಾ ಅರಿಶಿನದ ಎಲೆಯ ಮೇಲೆ ಬಿಸಿ ಅನ್ನ ಹರಡಿ ಈ ಕಾದ ಕಲ್ಲಿಟ್ಟು ಅದರ ಮೇಲೆ  ಗಟ್ಟಿ ಮೊಸರು ಹಾಕಿ ಕಲಸಿ ಎರಡು ನಿಮಿಷ ಹಬೆಯು ಹೊರ ಹೋಗದಂತೆ ಎಲೆಯಿಂದ ಮುಚ್ಚುತ್ತಾರಂತೆ‌.‌ ನಂತರ ಎಲೆ ತೆಗೆದು ಉಪ್ಪು/ಉಪ್ಪಿನ ಕಾಯಿ/ ಹಪ್ಪಳದ ಜೊತೆ ಈ ಕಲ್ಮೊಸರನ್ನವನ್ನು ತಿನ್ನುತ್ತಾರಂತೆ‌‌. ತುಂಬ ರುಚಿಕರ ಹಾಗೂ ಆರೋಗ್ಯಕರವಾದ ಊಟ ಇದು‌ ಎನ್ನಲಾಗುತ್ತದೆ. ಇದನ್ನು ಓದಿದ ಯಾರಿಗೇ ಆದರೂ  ಒಮ್ಮೆ ಇದನ್ನು ತಿನ್ನಬೇಕು ಎಂಬ ಆಸೆ ಆಗುವುದು ಖಂಡಿತ. ‌ಏನಂತೀರಿ!? ಕನ್ನಡ ನಾಡಿಗೆ ಮತ್ತು ಅದರ ಖಾದ್ಯಗಳಿಗೆ ಒಮ್ಮೆ ಜೈ ಅನ್ನೋಣ ಕಣ್ರಿ.