“ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ, ಕುವೆಂಪು ಅವರ ಪ್ರಸಿದ್ಧ ಕವಿತೆಯಲ್ಲಿ “ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀ ಅಮ್ಮಗೆ ಕಲ್ಪತರು” ಎಂಬ ಒಂದು ಸಾಲು ಬರುತ್ತದೆ. ಈ ಮಾಹಿತಿ‌ ತಂತ್ರಜ್ಞಾನ ಯುಗದಲ್ಲಿ, ಗೂಗಲಪ್ಪ ಮತ್ತು ಯೂಟ್ಯೂಬಮ್ಮನ ಆಳ್ವಿಕೆಯಲ್ಲಿ ಕನ್ನಡತನವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಸವಾಲು ಎದುರಾಗುತ್ತದೆ‌. 

ಇದರಲ್ಲಿ ಎರಡು ವಿಷಯಗಳು ಬಹಳ ಮುಖ್ಯ ಅನ್ನಿಸುತ್ತವೆ.‌ ಒಂದು ಇಂದಿನ ಹೊಸ ಹೊಸ ‘ಜಾಣ ಉಪರಣಗಳಿಗೆ’ ಒಗ್ಗುವಂತೆ, ಸಲ್ಲುವಂತೆ

ಕನ್ನಡವನ್ನು ಸಬಲಗೊಳಿಸುವುದು‌, ಮತ್ತು ಎರಡು ನಮ್ಮ ಮಕ್ಕಳು ಮತ್ತು ಯುವಜನಾಂಗದ ಮನಸ್ಸು ಹಾಗೂ ನಾಲಗೆಗಳಲ್ಲಿ ಕನ್ನಡವು ‘ಕುಣಿದಾಡುವಂತೆ’ ಮಾಡುವುದು‌.‌ ಇಂದಿನ ಬಂಡವಾಳಶಾಹಿ – ಲಾಭದೃಷ್ಟಿಯ ಕೊಳ್ಳುಬಾಕ ಯುಗದಲ್ಲಿ, ಭಾಷೆಯನ್ನು ಕೇವಲ ಒಂದು ಉಪಕರಣ ಎಂದು ನೋಡುತ್ತಿರುವ ಸನ್ನಿವೇಶದಲ್ಲಿ, ಈ ಎರಡು ಕೆಲಸಗಳನ್ನು ಮಾಡುವುದು ಖಂಡಿತ ಸುಲಭ ಅಲ್ಲ‌. ಆದರೆ ಮಾಡದಿದ್ದರೆ ಕನ್ನಡಕ್ಕೆ ಭವಿಷ್ಯವಿಲ್ಲ ; ನಾವು ಏನೂ ಮಾಡದೆ ಸುಮ್ಮನಿದ್ದರೆ, ‘ಸಿರಿಗನ್ನಡಂ ಗೆಲ್ಗೆ’  ಎಂದ ನಮ್ಮ ಸುಕವಿಗಳ ಕನಸಿನಂತೆ ಕನ್ನಡವು ಸಂವರ್ಧಿಸುವುದಿಲ್ಲ ; ಮುಂದಿನ ದಿನಗಳಲ್ಲಿ ಚೂರು ಜೀವ ಹಿಡಿದುಕೊಂಡು ಹಿತ್ತಲಿನ ಭಾಷೆಯಾಗಿ ಉಳಿದರೂ, ಮುಖ್ಯವಾಹಿನಿಯಲ್ಲಿ ವಿರಾಜಮಾನವಾಗುವುದಿಲ್ಲ.

ಐವತ್ತು – ಅರವತ್ತು ವರ್ಷಗಳ ಹಿಂದೆ ಕನ್ನಡದ ಕಟ್ಟಾಳು ಶ್ರೀ ಅನಕೃ ಅವರು ಕನ್ನಡದ ಉಳಿವಿಗಾಗಿ ಕೊಟ್ಟ “ಕನ್ನಡ ಪುಸ್ತಕಗಳನ್ನು ಓದೋಣ, ಕನ್ನಡ ಹಾಡುಗಳನ್ನು ಹಾಡೋಣ, ಕನ್ನಡ ಭಾಷೆಯಲ್ಲಿ ಮಾತಾಡೋಣ, ಕನ್ನಡ ಸಿನಿಮಾಗಳನ್ನು ನೋಡೋಣ” ಎಂಬ ನಾಲ್ಕು ಸೂತ್ರಗಳೊಡನೆ, “ಮಾಹಿತಿ ಯುಗದ  ಜಾಣೋಪಕರಣಗಳಲ್ಲಿ ಕನ್ನಡ ಬಳಸೋಣ” ಎಂಬ ಐದನೆಯ ಸೂತ್ರವನ್ನು ಸೇರಿಸುವ ಕಾಲ ಬಂದಿದೆ ಅನ್ನಿಸುತ್ತೆ. ಹೀಗೆ ಮಾಡಿದಾಗ ಮಾತ್ರ ನಿಜ ಅರ್ಥದಲ್ಲಿ ಕನ್ನಡ ಸಂವರ್ಧನೆ ಸಾಧ್ಯ.