ನಾನು ಈ ಬರಹದ ಶೀರ್ಷಿಕೆಯಲ್ಲಿ ಬಳಸಿರುವ ಪದಗಳನ್ನು ಕನ್ನಡ ನಾಡಿನಲ್ಲಿ ಬಹಳ ಸಲ ಕೇಳುತ್ತೇವೆ, ಅಲ್ಲವೆ? ಬೋಂಬೆ ಹಲ್ವಾ, ಬೋಂಬೆ ರವಾ, ಬೋಂಬೆ ಮಿಠಾಯಿ, ಬೋಂಬೆ ಟಾಕೀಸ್, ಬೊಂಬಾಯ್ ಮಾಮ……ಕನ್ನಡ ಭಾಷೆಯಲ್ಲಿ ಎಷ್ಟೆಲ್ಲ ಪದಗಳು ಈ ಬೋಂಬೆ ಪದದಿಂದ ಪ್ರಾರಂಭವಾಗುತ್ತವೆ ಎಂದರೆ ಅಚ್ಚರಿಯಾಗುತ್ತದೆ! ಇದಕ್ಕೆ ಕಾರಣ ಏನಿರಬಹುದು ಎಂದು ಒಂದಿಷ್ಟು ವಿಚಾರಿಸಿ, ಓದಿ ನೋಡಿದಾಗ ಈ ಕೆಳಗಿನ ಅಂಶಗಳು ತಿಳಿದು ಬಂದವು.
1.ಕನ್ನಡ ನಾಡಿನ ಏಕೀಕರಣಕ್ಕೆ ಮುಂಚೆ ಧಾರವಾಡ, ಬೆಳಗಾವಿ, ಬಿಜಾಪುರ ಮೊದಲಾದ ಪ್ರದೇಶಗಳು ಬ್ರಿಟಿಷ್ ಭಾರತದ ಬೋಂಬೆ ಪ್ರೆಸಿಡೆನ್ಸಿಗೆ ಸೇರಿದ್ದವು( ಈಗಿನ ಕಿತ್ತೂರು ಕರ್ನಾಟಕ). ಹೀಗಾಗಿ ಆ ಪ್ರದೇಶಗಳ ಬೊಂಬಾಯಿ ಸಂಪರ್ಕವನ್ನು ಈ ಪೂರ್ವಪದ (ಬೋಂಬೆ) ತೋರಿಸುತ್ತದೆ.
2. ಬೊಂಬಾಯಿ ಅನ್ನುವುದು ಭಾರತವು ಆಧುನೀಕರಣಗೊಳ್ಳುತ್ತಿದ್ದಾಗ ಬಹಳ ಮುಖ್ಯವಾದ ರೇವುಪಟ್ಟಣವಾಗಿತ್ತು. ಅದು ಉದ್ಯೋಗಾವಕಾಶಗಳು, ಕೈಗಾರಿಕೆಗಳ ಪ್ರದೇಶವಾಗಿತ್ತು. ಜೊತೆಗೆ, ಸಿನಿಮಾ ನಿರ್ಮಾಣದ ಕನಸಿನ ನಗರಿಯಾದದ್ದರಿಂದ ಅದರಲ್ಲಿ ಅನೇಕ ಹೊಸ ಆವಿಷ್ಕಾರಗಳು ಆಗುತ್ತಿದ್ದವು. ಉದಾಹರಣೆಗೆ, ಬೋಂಬೆ ಮಿಠಾಯಿ ತಿಂಡಿ. ಸಕ್ಕರೆಯನ್ನು ಕಾಯಿಸಿ ಎಳೆಗಳ ರೂಪದಲ್ಲಿ ಕೊಡಲಾಗುವ ಒಂದು ಗುಲಾಬಿ ಬಣ್ಣದ ಸಿಹಿತಿನಿಸು.
3. ಕನ್ನಡನಾಡಿನಿಂದ ಮುಂಬೈಗೆ ಉದ್ಯೋಗಾವಕಾಶವನ್ನು ಅರಸಿ ಹೋಗುವವರು ಬಹಳ ಜನ ಇದ್ದದ್ದರಿಂದ ಅವರನ್ನು ಬೋಂಬೆ ಅಂಕಲ್, ಬೋಂಬೆ ಆಂಟಿ ಎಂದು ಕರೆಯುವ ರೂಢಿ ಇತ್ತು. ಬೋಂಬೆ ಪೂರ್ವಪದದ ಬಹುಚಲಾವಣೆಗೆ ಇದೂ ಸಹ ಒಂದು ಕಾರಣ.
ಒಟ್ಟಿನಲ್ಲಿ ಬೋಂಬೆಯನ್ನು ಪೂರ್ವಪದವಾಗಿ ಬಳಸುವ ಕನ್ನಡಿಗರ ಇಷ್ಟದ ಅಭ್ಯಾಸವು, ನಮ್ಮ ರಾಜ್ಯದ ಮೇಲೆ ಪ್ರಾಚೀನ ಕಾಲದಿಂದಲೂ ಬೊಂಬಾಯಿಯು ಬೀರಿದ್ದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪರಿಣಾಮಗಳಿಗೆ ಸಾಕ್ಷಿಯಾಗಿದೆ. ಅಂದ ಹಾಗೆ ವಿಪರೀತ ಮಾತಾಡುವವರಿಗೆ ‘ಬಾಯಿ ಬೊಂಬಾಯಿ’ ಎಂಬ ಪದವನ್ನು ಬಳಸುತ್ತಾರೆ!!
Like us!
Follow us!