ಕನ್ನಡ ಅಧ್ಯಾಪಕಿಯಾದ ನನ್ನ ವೃತ್ತಿಜೀವನದಲ್ಲಿ ಒಮ್ಮೊಮ್ಮೆ ಕನ್ನಡ ಭಾಷೆಯ ಕಾರಣದಿಂದಲೇ ಕೆಲವು ಅಚ್ಚರಿಯ ಸಂಗತಿಗಳು ಜರುಗ್ತವೆ‌. ಇದೋ ಇಲ್ಲಿದೆ ಅಂತಹ ಒಂದು ಪ್ರಸಂಗ.

ಈಚೆಗೆ ನಾನು ನಮ್ಮ ವಿಶ್ವವಿದ್ಯಾಲಯದ ಉತ್ತರಪತ್ರಿಕೆಗಳ ಸಂರಕ್ಷಣ ಘಟಕದಲ್ಲಿ ಕೆಲಸ ಮಾಡ್ತಿದ್ದೆ. ಎಲ್ಲ ಅಧ್ಯಾಪಕರೂ ಮೌಲ್ಯಮಾಪನ ಮಾಡಲು ಆ ಘಟಕಕ್ಕೆ ಬಂದು ಉತ್ತರಪತ್ರಿಕೆಗಳನ್ನು ಘಟಕದಿಂದ ತೆಗೆದುಕೊಳ್ಳೋದು, ಮೌಲ್ಯಮಾಪನ ಮಾಡಿ ಮರಳಿಸೋದು – ಇವನ್ನ ಮಾಡ್ತಾ ಇರ್ತಾರೆ. ಈ ಘಟಕಕ್ಕೆ ನಿರ್ಬಂಧಿತ ಪ್ರವೇಶ ಇರುತ್ತೆ‌.‌ ಹಾಗಾಗಿ ಬಾಗಿಲಿಗೆ ಒಂದು ಭಾರವಾದ ಮೇಜನ್ನೋ, ಇಳಿಮೇಜನ್ನೋ ( ಡೆಸ್ಕ್) ಅಡ್ಡವಾಗಿ ಇಟ್ಟಿರುತ್ತಾರೆ.‌ ಇಲ್ಲಿ ಮೊನ್ನೆ ಏನಾಯಿತೆಂದರೆ ಒಬ್ಬರು ಹೊಸದಾಗಿ ವೃತ್ತಿ ಪ್ರಾರಂಭಿಸಿದ‌ ಅತಿಥಿ ಉಪನ್ಯಾಸಕರೊಬ್ಬರು ಉತ್ತರ ಪತ್ರಿಕೆ ಪಡೆದುಕೊಳ್ಳಲು ಬಂದವರು ಬಾಗಿಲಿಗೆ ಅಡ್ಡಲಾಗಿ ಇಟ್ಟಿದ್ದ ಉದ್ದಮೇಜನ್ನು ಕಷ್ಟ ಪಟ್ಟು ಸರಿಸುವ ಪ್ರಯತ್ನ ಮಾಡ್ತಿದ್ರು. ಅಂದು ಆ ಘಟಕದ ಮೇಲ್ವಿಚಾರಣೆಯ ಕರ್ತವ್ಯ ಹೊಂದಿದ್ದ ನಾನು “ಮೇಡಂ, ಆ ಮೇಜು ಹಾಗೇ ಇರ್ಲಿ. ಇಲ್ಲಿ‌ ಒಳಗೆ ಪ್ರವೇಶ ಇಲ್ಲ. ನಿಮ್ಗೆ ಯಾವ ಉತ್ತರ ಪತ್ರಿಕೆ ಬೇಕು ಹೇಳಿ. ನಾನು ಅದನ್ನ ನಿಮಗೆ ಕೊಡಿಸೋ ವ್ಯವಸ್ಥೆ ಮಾಡ್ತೀನಿ” ಅಂದೆ.‌ ಅವರು “ಏನ್ ಮೇಡಂ! ಇಷ್ಟೊಂದ್ ಕನ್ನಡ ಮಾತಾಡ್ತೀರಲ್ಲ!” ಅಂದರು. ನನಗೆ ಅವರ ಮಾತಿನಿಂದ ತುಸು ಅಚ್ಚರಿ ಆಯಿತು, ತುಸು ನಗು ಸಹ ಬಂತು‌. “ಏನ್ ಮಾಡೋದು ಹೇಳಿ! ನಾನು ಕನ್ನಡ ಅಧ್ಯಾಪಕಿ‌. ಕನ್ನಡದಲ್ಲೇ ಅದೂ ಗರಿಷ್ಠ ಕನ್ನಡದಲ್ಲೇ ಮಾತಾಡಬೇಕಾಗುತ್ತೆ” ಎಂದೆ. ” ಓ…ಹಾಗಾ!? “ಅಂದರು ಅವರು.

ಸೂರ್ಯನನ್ನ “ಏನು, ದಿನ ಬೆಳಗಾದ್ರೆ ಪೂರ್ವದಲ್ಲಿ ಹುಟ್ಟಿ, ಇಡೀ ದಿನ ಉರೀತೀಯಲ್ಲ!? ಯಾಕೆ? ಎಂದು ಕೇಳಿದರೆ ಅವನು ಇಂತಹದ್ದೇ ಪೇಚಿಗೆ ಸಿಕ್ಕಿ ಹಾಕಿಕೊಳ್ಳಬಹುದೇನೋ!