ಪ್ರಪಂಚದ ಬಹುತೇಕ ದೇಶಗಳು ಪುರುಷ ಪ್ರಧಾನ ವ್ಯವಸ್ಥೆಯನ್ನು ಹೊಂದಿರುವುದರಿಂದ ಮಹಿಳೆಯೊಬ್ಬರು ದೇಶದ ಪ್ರಥಮ ಪ್ರಜೆಯಾಗುವುದೆಂದರೆ ಅದು ವಿಶೇಷವಾದ ಮತ್ತು ಹೆಮ್ಮೆ ಪಡುವ ಸಂಗತಿಯಾಗಿದೆ. ೨೫-೦೭-೨೦೦೭ರಂದು ಶ್ರೀಮತಿ ಪ್ರತಿಭಾ ಪಾಟೀಲ್ ಅವರು ಭಾರತದ ಮೊಟ್ಟಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರಾದಾಗ ಅವರನ್ನು ಏನೆಂದು ಕರೆಯುವುದು ಎಂದು ಗೊಂದಲವಾಯಿತು. ಅವರನ್ನು ರಾಷ್ಟ್ರಪತಿ ಎಂದು ಕರೆಯಲಾಗದು. ಪತಿ ಎಂಬ ಪುಲ್ಲಿಂಗನಾಮವನ್ನು ಮಹಿಳೆಗೆ ಬಳಸುವುದು ಹೇಗೆ?

ಇನ್ನೂ ಕೆಲವು ಪದಗಳಿವೆ. ಉದಾಹರಣೆಗೆ ಕಾಲೇಜುಗಳಲ್ಲಿ ಅಧ್ಯಾಪಕಿಯರಿಗೆ ಬಳಸುವ ಪದ ಮೇಡಂ, ಮ್ಯಾಮ್. ಇದಕ್ಕೆ ಯಾವ ಕನ್ನಡ ಪದ ಬಳಸಬೇಕು ಎಂದು ವಿದ್ಯಾರ್ಥಿನಿಯರು ಕೇಳುತ್ತಾರೆ. `ಗುರುಗಳೇ’, `ಶಿಕ್ಷಕಿಯವರೇ’ ಇವೆಲ್ಲ ತೀರಾ ಶಾಸ್ತ್ರೀಯ, ಮತ್ತು ಗ್ರಾಂಥಿಕ ಅನ್ನಿಸುತ್ತೆ. ಉತ್ತರ ಕರ್ನಾಟಕದಲ್ಲಿ `ಅಕ್ಕೋರೇ’ ಎಂಬ ಪದ ಇದೆ. ಇದನ್ನು ಶಾಲಾ ಶಿಕ್ಷಕಿಯರಿಗೆ ಬಳಸುತ್ತಾರೆ.

`ಥ್ಯಾಂಕ್ಸ್’ ಕೂಡ ಇಂಥದ್ದೇ ಒಂದು ಪದ. ಧನ್ಯವಾದ, ವಂದನೆ ಇವೆಲ್ಲ ತುಂಬ ಗ್ರಾಂಥಿಕ ಅನ್ನಿಸುತ್ತೆ. ವೈಫೈ, ಅಪ್‌ಲೋಡ್, ಡೌನ್‌ಲೋಡ್, ಪಿಪಿಟಿ, ಹಾರ್ನ್, ಸಿಮ್‌ಕಾರ್ಡ್ …….. ಬೆಳೆಯುತ್ತಲೇ ಹೋಗುತ್ತದೆ ಈ ಪದಗಳ ಪಟ್ಟಿ! ಹೇಗೆ ಇವನ್ನು ಕನ್ನಡೀಕರಿಸುವುದು ಎಂಬ ಪ್ರಶ್ನೆ ಉಳಿದೇಬಿಡುತ್ತದೆ. ಇವುಗಳನ್ನು ಹೀಗೆಯೇ ಬಳಸುವುದೋ, ಉಕಾರಾಂತ್ಯ ನೀಡಿ ಬಳಸುವುದೋ, ಅಥವಾ ಹೊಸ ಪದಗಳನ್ನು ನಿರ್ಮಿಸಿಕೊಳ್ಳವುದೋ ಎಂಬ ಗೊಂದಲ ಮೂಡುತ್ತದೆ. ಒಂದು ಜೀವಂತ ಭಾಷೆಯ ಸಂದರ್ಭದಲ್ಲಿ ಇದು ಸಹಜ.