ಈಚೆಗೆ ನಾನು ನಮ್ಮ ಕುಟುಂಬದ ಒಬ್ಬ ಸ್ನೇಹಿತರ ಮನೆಗೆ  ಸಮಾರಂಭವೊಂದಕ್ಕಾಗಿ ಹೋಗಿದ್ದೆ. ಇನ್ನೂ ಕೆಲವು ನೆಂಟರಿಷ್ಟರು ಅಲ್ಲಿ ಸೇರಿದ್ದರು.‌ ಅಲ್ಲಿ ಎಲ್ಲರ ಮಾತಿನ ಆಸಕ್ತಿಗೆ ಕಾರಣವಾದದ್ದು ಒಂದು ಸೋಫಾ ಸೆಟ್ಟು! ಇದಕ್ಕೆ ಕಾರಣವೇನೆಂದರೆ ಅಂದು ಅತಿಥೇಯರ ಮನೆಯ ಪಡಸಾಲೆಯ ನಡುಮಧ್ಯದಲ್ಲಿ ಒಂದು ಹೊಸ ಸೇಫಾ ಸೆಟ್ಟು ವಿರಾಜಮಾನವಾಗಿತ್ತು.‌ ಹೆಚ್ಚು ಕಮ್ಮಿ ಬಿಳಿಬಣ್ಣದ್ದೇ ಅನ್ನಬಹುದಾದ ನೀಲಿಯ ಅತಿ ತಿಳಿ ಛಾಯೆಯ  ಪೀಠಾವಳಿ ಅದು.‌ ‘ಮೂರು ಲಕ್ಷ ರೂಪಾಯಿ ಕೊಟ್ಟು ಅದನ್ನು ಕೊಂಡಿದ್ದೀವಿ, ಆದರೆ ಈಗ ಅದರ ಮೇಲೆ ಒಂದು ಪುಟಾಣಿ ಕಲೆ ಆಗಿದೆ,  ತನ್ನ ಮಗ ಕಸರತ್ತು ಕೇಂದ್ರ ( ಜಿಮ್) ದಿಂದ ಬಂದು, ಕಾಲು ತೊಳೆಯದೆ ನೇರವಾಗಿ ಅದರ ಮೇಲೆ ಕುಳಿತದ್ದರಿಂದ ಆ ಕಲೆ ಆಗಿದೆ’ಯೆಂದು ಆ ಮನೆಯೊಡತಿ ಮುಖ ಚಿಕ್ಕದು ಮಾಡಿಕೊಂಡು ಹೇಳಿದರು.‌ 

 ಅಬ್ಬ!!  ನೋಡಿ ಆಗ! ಬಂದ ಅತಿಥಿಗಳ ನಡುವೆ ಒಂದು ದೊಡ್ಡ ಚರ್ಚೆಯೇ ಶುರುವಾಗಿಬಿಟ್ಟಿತು.  ಸೋಫಾ ಮೇಲೆ ಕುಳಿತಾಗ ಕಾಲನ್ನು  ಮೇಲೆ ಇಡಬಹುದೋ ಇಡಬಾರದೋ, ಕೊಳೆಯಾದರೆ…ಅಯ್ಯೋ ‌…ಅದನ್ನು ತೊಳೆಯುವುದು ಹೇಗೆ,  ನಾವು ತೊಳೆಯಕ್ಕೆ ಆಗಲ್ಲ – ಸೋಫಾ ಮಾರುವ ಸಂಸ್ಥೆಯವರೇ ಬಂದು ಶುಚಿ ಮಾಡಬೇಕು, ಆ ವ್ಯವಸ್ಥೆ ಇದೆಯಂತೆ….ತಲೆಗೆ ಎಣ್ಣೆ ಹಚ್ಚಿಕೊಂಡವರು ತಲೆಯನ್ನು ಹಿಂದಕ್ಕೆ ಒರಗಿಸಿದರೆ ಏನೇನು ತೊಂದರೆ ಆಗುತ್ತೆ, ಸೋಫಾಗೆ ಹೊದಿಕೆ 

(ಕವರ್) ಹಾಕಿದರೆ ಚೆನ್ನಾಗಿರುತ್ತಾ –  ಚೆನ್ನಾಗಿರಲ್ವಾ… ಮನೆಯಲ್ಲಿರುವಾಗ ಕಾಲುಚೀಲ ( ಸಾಕ್ಸ್) ಹಾಕಿಕೊಂಡರೆ ಸೋಫಾ ಕೊಳೆ ಆಗುವುದಿಲ್ಲವಲ್ಲ, ಅಯ್ಯೋ.. ಇಷ್ಟೆಲ್ಲ ಜಾಗರೂಕತೆ ವಹಿಸಬೇಕಾದರೆ ಅದು ನಾವು ಆರಾಮವಾಗಿ, ಹೇಗೆಂದರೆ ಹಾಗೆ ಇರಬಹುದಾದ ನಮ್ಮ ಮನೆ ಹೇಗಾಗುತ್ತೆ‌‌‌‌‌‌…..ಹೀಗೆ ಚರ್ಚೆ ಮುಂದುವರೆಯುತ್ತಲೇ ಹೋಯಿತು.‌

ಈ ಚರ್ಚೆಯನ್ನು   ಕೇಳಿಸಿಕೊಳ್ಳುತ್ತಿದ್ದ ನನಗೆ ಕನ್ನಡದ ಲಲಿತ ಪ್ರಬಂಧ ಸಾಹಿತ್ಯ ‌‌‌‌‌ ಪ್ರಕಾರದಲ್ಲಿ ಬಹು ದೊಡ್ಡ ಹೆಸರಾದ, ಶತಾಯುಷಿ ಶ್ರೀ ಎ.ಎನ್.ಮೂರ್ತಿರಾವ್ ಅವರ ‘ದಿವಾನಖಾನೆಯ ಅಂದಚಂದ’ ಎಂಬ ಲಲಿತ ಪ್ರಬಂಧ ನೆನಪಾಯಿತು. ಅದರಲ್ಲಿ ಅವರು ಒಮ್ಮೆ ತಮ್ಮ  ಪತ್ನಿಯು  ಮನೆಯ ದಿವಾನಖಾನೆ( ಹಾಲ್) ಯನ್ನು ‘ಸಮುದ್ರದ ಹಸಿರು’ ಬಣ್ಣದಿಂದ ಅಲಂಕರಿಸಲು‌ ಮನಸ್ಸು ಮಾಡಿ, ಹೇಗೆ ತಮಗೆ ಆ ದಿವಾನಖಾನೆಯಲ್ಲಿ ಓಡಾಡುವ, ಕೂರುವ- ಏಳುವ  ರೀತಿಗಳ ನಿಯಮ-ನಿರ್ಬಂಧಗಳನ್ನು ಮಾಡಿದರು ಎಂಬುದನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ. ಎಷ್ಟೇ ತಮಾಷೆ ಇದ್ದರೂ ಕೊನೆಗೂ ನಮ್ಮ ಮನೆ ಮತ್ತು ಅದರಲ್ಲಿ ನಾವು ಬಳಸುವ ವಸ್ತುಗಳು ನಮಗೆ ಕಿರಿಕಿರಿಯಾಗುವಷ್ಟು ಪರಿಷ್ಕೃತವಾಗಬಾರದಲ್ಲವೇ ಎಂಬ ಪ್ರಶ್ನೆಯೊಂದು ಆ ಪ್ರಬಂಧದ  ಓದುಗರಲ್ಲಿ ಹುಟ್ಟುತ್ತದೆ.  ಬಹುಶಃ ಮೂರ್ತಿರಾಯರ ಉದ್ದೇಶವೂ ಈ ಪ್ರಶ್ನೆಯನ್ನು ಹುಟ್ಟಿಸುವುದೇ ಆಗಿದ್ದಿರಬಹುದು. 

ಹೌದು, ನಮ್ಮ ಮನೆಯ ವಸ್ತುಗಳು ನಮಗಾಗಿ ಇದ್ದಾವೆಯೋ, ಅಥವಾ ನಾವು ಅವುಗಳಿಗಾಗಿ ಇದ್ದೇವೋ…? ಕೇಳಿಕೊಳ್ಳಬೇಕು ಅನ್ನಿಸುತ್ತೆ… ಅಲ್ಲವೇ?ಏನಂತೀರಿ?