ಡಾ.ಎಲ್.ಜಿ.ಮೀರಾ ಅವರ ಜಾಲಪುಟ(ಬ್ಲಾಗ್) ಕನ್ನಡಸೇತು.ಕಾಮ್. ಇದನ್ನು ದಿನಾಂಕ ೧೯-೧೦-೨೦೨೨, ಬುಧವಾರದಿಂದ ಪ್ರಾರಂಭಿಸಲಾಗಿದೆ ಹಾಗೂ ಪ್ರತಿ ಬುಧವಾರ ಇದನ್ನು ಹೊಸದಾಗಿಸಲು ಯೋಜಿಸಲಾಗಿದೆ. ಹೆಸರಿನ ಮೂಲಕವೇ ಊಹಿಸಬಹುದಾದಂತೆ ಕನ್ನಡದ ಮೂಲಕ ವಿಶ್ವಕ್ಕೆ ಒಂದು ಸೇತುವೆ ಕಟ್ಟುವುದು `ಕನ್ನಡಸೇತು'ವಿನ ಉದ್ದೇಶ.

ತನ್ನ ಬರಹ ರೂಪಕ್ಕೆಯೇ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಜೀವಂತ, ಶ್ರೀಮಂತ ಭಾಷೆ ಕನ್ನಡ. ಇದು ಕಾಲದ ಎಲ್ಲ ಸವಾಲುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ನವನವೀನಗೊಳ್ಳುತ್ತಿದೆ. ಇಂದಿನ ಅಂದರೆ ೨೧ನೇ ಶತಮಾನದ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಆಗಿರುವ ಕನ್ನಡದ ಡಿಜಿಟಲ್ ನವೋದಯವು ಇದರ ಹೊಚ್ಚಹೊಸ ರೂಪ. ನಿಜಭಾಸ(ವರ್ಚುವಲ್) ವಿಶ್ವವು ನಿಜ ವಿಶ್ವದಷ್ಟೇ ಪರಿಣಾಮಕಾರಿಯಾಗಿರುವ ಇಂದಿನ ಕಾಲಮಾನದಲ್ಲಿ ಕನ್ನಡವು ಇಂದೀಕರಣಗೊಳ್ಳಬೇಕಾದರೆ ಅದು ಮಾಹಿತಿ ತಂತ್ರಜ್ಞಾನಾಧಾರಿತ ಬದುಕಿನ ಜೀವತಂತುಗಳೊಂದಿಗೆ ತನ್ನ ಜೀವತಂತುಗಳನ್ನು ಬೆಸೆದುಕೊಳ್ಳಬೇಕಿದೆ. ಇಷ್ಟೇ ಅಲ್ಲದೆ ನಿಜ ಬದುಕಿನಲ್ಲೂ, ಜಾಗತೀಕರಣದ ನಂತರ ತುಂಬ ಬದಲಾಗಿರುವ ಕನ್ನಡ ನಾಡಿನ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಲು ಮನಸ್ಸು ಮನಸ್ಸುಗಳ ನಡುವೆ ಹೊಸ ಸೇತುವೆಗಳನ್ನು ನಾವು ಕಟ್ಟಿಕೊಳ್ಳಬೇಕಿದೆ. ಈ ದೃಷ್ಟಿಯಿಂದ ಹೊಸ ಹೊಸ ಪದಗಳು, ವಿಷಯಗಳು, ಜ್ಞಾನಶಿಸ್ತುಗಳು ಕನ್ನಡಕ್ಕೆ ಬರಬೇಕು. ಕನ್ನಡವನ್ನು ಈ ಹೊಸ ವಿಶ್ವಕ್ಕಾಗಿ ಇನ್ನಷ್ಟು, ಮತ್ತಷ್ಟು ಸಮರ್ಥವಾಗಿ ಸಜ್ಜುಗೊಳಿಸುವುದು ಇಂದಿನ ಅಗತ್ಯವಾಗಿದೆ. ಅನೇಕ ಕನ್ನಡಾಸಕ್ತರು, ವಿದ್ವಾಂಸರು, ಕನ್ನಡಾಭಿಮಾನಿಗಳು ಈ ದಿಸೆಯಲ್ಲಿ ದುಡಿಯುತ್ತಿದ್ದಾರೆ. ಈ ಪ್ರಯತ್ನದ ಒಂದು ಭಾಗವಾಗಲು ಬಯಸುತ್ತದೆ ಕನ್ನಡಸೇತು.ಕಾಮ್ ಜಾಲಪುಟ.

`ಕನ್ನಡವು ಕನ್ನಡವ ಕನ್ನಡಿಸುತಿರಲಿ' ಎಂದರು ಕನ್ನಡದ ವರಕವಿ ಬೇಂದ್ರೆ. ಹಿರಿಯರು ಹಾಗೂ ಕಿರಿಯರ ನಡುವೆ, ಸಂಪನ್ಮೂಲ ವ್ಯಕ್ತಿಗಳು ಮತ್ತು ಜ್ಞಾನಾಸಕ್ತರ ನಡುವೆ, ಬೇರೆ ಬೇರೆ ಭಾಷೆಗಳ ನಡುವೆ, ವಿವಿಧ ಜ್ಞಾನಶಿಸ್ತುಗಳ ನಡುವೆ, ಹೇಳುವವರು ಮತ್ತು ಕೇಳುವವರ ನಡುವೆ ಒಟ್ಟಾರೆಯಾಗಿ ಕನ್ನಡ ಮನಸ್ಸುಗಳ ನಡುವೆ ಕನ್ನಡದ ಮೂಲಕ ಸೇತುವೆ ಕಟ್ಟುವುದು ಕನ್ನಡಸೇತುವಿನ ಗುರಿ.

ಭೌತಿಕವಾಗಿ ವಿಶ್ವವ್ಯಾಪಿಯಾಗಿ ನೆಲೆಸಿ, ಅಂತರ್ಜಾಲವೆಂಬ ಹೆಣಿಗೆಯ ಮೂಲಕ ಈ ವಿಶ್ವದೊಳಗೊಂದು ಕನ್ನಡ ವಿಶ್ವದ ನಿರ್ಮಾಣಕ್ಕೆ ಕಾರಣವಾಗಿರುವ ಎಲ್ಲ ಕನ್ನಡ ಬಂಧುಗಳಿಗೆ ಈ ಮೂಲಕ ನಮಸ್ಕರಿಸುತ್ತಾ, ಅವರು ಕನ್ನಡಸೇತುವನ್ನು ತೆರೆದ ಬಾಹುಗಳಿಂದ ಸ್ವಾಗತಿಸುತ್ತಾರೆ ಎಂದು ಭಾವಿಸುತ್ತೇನೆ.