ಕನ್ನಡ ಅಧ್ಯಾಪಕಿಯಾಗಿ ಕೆಲವು ವರ್ಷಗಳಿಂದ ನಾನು ಕನ್ನಡ ಭಾಷಾಬಳಕೆಯಲ್ಲಿ ಒಂದು ಪ್ರಯೋಗವನ್ನು ಮಾಡುತ್ತಿದ್ದೇನೆ. ಅದೇನೆಂದರೆ, ಮಾತಾಡುವಾಗ ಗರಿಷ್ಠ ಪ್ರಮಾಣದಲ್ಲಿ ಕನ್ನಡದ್ದೇ ಆದ ಪದಗಳನ್ನು ಬಳಸುವ ಪ್ರಯೋಗ. ದಿನ ಬಳಕೆಯ ಮಾತಿನಲ್ಲಿ ಮತ್ತು ತರಗತಿಯ ಪಾಠದಲ್ಲಿ ಕನ್ನಡ ಪದಗಳು ಸಿಗುವ ಸಾಧ್ಯತೆ ಇರುವಲ್ಲೆಲ್ಲಾ ಕನ್ನಡ ಪದಗಳನ್ನೇ ಬಳಸುವುದು ನನ್ನ ಪ್ರಯತ್ನವಾಗಿರುತ್ತದೆ.
ಉದಾಹರಣೆಗೆ : Class – ತರಗತಿ
Test – ಕಿರುಪರೀಕ್ಷೆ
Assignment – ನಿಯೋಜಿತ ಕಾರ್ಯ
Room – ಕೋಣೆ/ಕೊಠಡಿ
Weekend – ವಾರಾಂತ್ಯ
Thanks – ಧನ್ಯವಾದಗಳು
Late – ತಡ
Library – ಗ್ರಂಥಾಲಯ
Lab – ಪ್ರಯೋಗಶಾಲೆ
Office – ಕಛೇರಿ
Accounts section – ಹಣಕಾಸು ವಿಭಾಗ
Principal – ಪ್ರಾಂಶುಪಾಲರು
Silent mode – ಮೌನಮಿಡಿತ
Internet – ಅಂತರ್ಜಾಲ
Connection – ಸಂಪರ್ಕ
Text book – ಪಠ್ಯಪುಸ್ತಕ
Meeting – ಸಭೆ
Attendance – ಹಾಜರಾತಿ
Students – ವಿದ್ಯಾರ್ಥಿನಿಯರು
Department – ವಿಭಾಗ
Password – ಪ್ರವೇಶಪದ
ಹೀಗೆ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಕನ್ನಡ ಪದಗಳನ್ನು ಬಳಸುವುದು ನನ್ನ ಪ್ರಯತ್ನವಾಗಿರುತ್ತೆ. ನನ್ನ ವಿದ್ಯಾರ್ಥಿಗಳು ಆದಷ್ಟೂ ಮಟ್ಟಿಗೆ ಕನ್ನಡ ಪದಗಳನ್ನು ಕೇಳಿಸಿಕೊಂಡು ತಮ್ಮ ಕನ್ನಡ ಪದಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು ಎಂಬುದು ನನ್ನ ಉದ್ದೇಶ.
“ಇದು ಕನ್ನಡ ಅಧ್ಯಾಪಕರು ಸಹಜವಾಗಿ ಮಾಡುವ ಮತ್ತು ಮಾಡಬೇಕಾದ ಕೆಲಸ, ಇದರಲ್ಲಿ ವಿಶೇಷ ಏನಿದೆ? ” ಎಂದು ಓದುಗರಿಗೆ ಅನ್ನಿಸಬಹುದು. ಆದರೆ ಬೆಂಗಳೂರಿನಲ್ಲಿ ಕನ್ನಡ ಮಾತಾಡುವವರು ಬಹಳಷ್ಟು ಇಂಗ್ಲಿಷ್ ಪದಗಳನ್ನು ಬಳಸಿ ಮಾತಾಡುವುದು ನಮಗೆ ಗೊತ್ತು. ಹೀಗಾಗಿ ನನ್ನ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿನಿಯರು ನನ್ನ ‘ಕನ್ನಡ ಕನ್ನಡ’ ಭಾಷೆಯನ್ನು ಕೇಳಿಸಿಕೊಂಡಾಗ ತುಸು ಅಚ್ಚರಿ ವ್ಯಕ್ತ ಪಡಿಸುತ್ತಾರೆ. ಹಾಸ್ಯ ಪ್ರವೃತ್ತಿಯ ಕೆಲವು ಸಹೋದ್ಯೋಗಿಗಳು ನನ್ನನ್ನು ಅನುಕರಿಸಿ ನಗಿಸುತ್ತಾರೆ. ಕೆಲವರು ಸಂತೋಷ ಪಡುತ್ತಾರೆ. ಇನ್ನು ಕೆಲವರು “ಇದು ತುಸು ಅತಿಯಾಯ್ತು, ಕನ್ನಡ ಬಳಸ್ಬಿಟ್ರೆ ಮಾತ್ರ ಕನ್ನಡಾಭಿಮಾನಾನ?” ಎಂದು ನನ್ನ ಗೈರುಹಾಜರಿಯಲ್ಲಿ ಹುಬ್ಬುಗಂಟಿಕ್ಕುತ್ತಾರೆ. ನಾನಂತೂ ಶ್ರದ್ಧೆಯಿಂದ ಈ ಕನ್ನಡ ಭಾಷಾ ‘ಪ್ರಯೋಗ’ವನ್ನು ಮಾಡುತ್ತ ಬಂದಿದ್ದೇನೆ. ನೋಡೋಣ…ಕಾಲವೇ ಇದರ ಫಲಿತಾಂಶ ನೀಡೀತು.