ಹಿಂದೆಯೂ ಈ ಅಂಕಣದಲ್ಲಿ ಕನ್ನಡ ತರಗತಿಗಳು ಮತ್ತು ಸಾರ್ವಜನಿಕ ಸಭೆಗಳಲ್ಲಿ ಉಂಟಾಗುವ ‘ಅ-ಹ ಕಾರದ ಹಾಹಾಕಾರ’ದ ಬಗ್ಗೆ ನಾನು ಬರೆದಿದ್ದೇನೆ. ನಮ್ಮ ನಾಡಿನ ಕೆಲವು ಭಾಗಗಳಲ್ಲಿ ಈ ಉಚ್ಚಾರ ಸಮಸ್ಯೆ ಎಷ್ಟು ಗಾಢವಾಗಿದೆ ಅಂದರೆ ವರ್ಷವರ್ಷಕ್ಕೂ, ನಮ್ಮ ತರಗತಿಗಳಲ್ಲಿ ಆಗಾಗ ಇದು ತಲೆದೋರುತ್ತಲೇ ಇರುತ್ತದೆ.
ಕಳೆದ ವಾರ ನನ್ನ ಬಿ.ಎಸ್ಸಿ. ಪದವಿಯ ಕನ್ನಡ ಭಾಷಾ ಚಟುವಟಿಕೆಯ ತರಗತಿಯೊಂದರಲ್ಲಿ ‘ನಾನಾರ್ಥಕ ಪದಗಳ’ ಬಗ್ಗೆ ಪಾಠ ಮಾಡುತ್ತಿದ್ದೆ. ಆಗ ‘ಅರಸು’ ಎಂಬ ಒಂದು ಪದ ಕೊಟ್ಟು ಇದಕ್ಕಿರುವ ನಾನಾರ್ಥಗಳನ್ನು ಹೇಳಿ ಎಂದು ವಿದ್ಯಾರ್ಥಿನಿಯರನ್ನು ಕೇಳಿದೆ. ನಾಮಪದವಾದರೆ ‘ರಾಜ’ ಮತ್ತು ಕ್ರಿಯಾಪದವಾದರೆ ‘ಹುಡುಕು’, ಹಾಗೂ ಕೆಲವು ವ್ಯಕ್ತಿನಾಮಗಳಲ್ಲಿ ಸೇರುವ ಕುಟುಂಬದ ಹೆಸರು ಎಂದು ಅವರು ಉತ್ತರ ಹೇಳಲಿ ಎಂಬ ನಿರೀಕ್ಷೆ ನನಗಿತ್ತು. ಆದರೆ ಕೆಲವು ವಿದ್ಯಾರ್ಥಿನಿಯರು ‘ಆಶೀರ್ವದಿಸು’ ಎಂದು ಉತ್ತರಿಸಿದಾಗ ನನಗೆ ಗಾಬರಿಯಾಯಿತು. ಅವರು ಈ ಪದವನ್ನು ‘ಹರಸು’ ಎಂದು ತಮ್ಮ ಮನಸ್ಸಿನಲ್ಲಿ ಓದಿಕೊಂಡಿದ್ದರು! ಆ ತರಗತಿಯಲ್ಲೇನೋ ಅ ಕಾರ- ಹ ಕಾರದ ಉಚ್ಚಾರ ವ್ಯತ್ಯಾಸ ತಿಳಿಸಿ ಇನ್ನೊಂದಷ್ಟು ಪದಗಳನ್ನು ಬರೆಸಿ, ಉಚ್ಚರಿಸುವಂತೆ ಮಾಡಿ, ಅವರಿಗೆ ಈ ಎರಡು ಅಕ್ಷರಗಳ ಉಚ್ಚಾರದ ವ್ಯತ್ಯಾಸವನ್ನು ಮನದಟ್ಟು ಮಾಡಿಸಲು ಪ್ರಯತ್ನಿಸಿದೆ ಅನ್ನಿ. ಆದರೆ ನಮ್ಮ ನಾಡಿನ ಮಕ್ಕಳಲ್ಲಿ ಈ ಸಮಸ್ಯೆ ಮೂಲತಃ ತಲೆದೋರದಂತೆ ಏನು ಮಾಡಬೇಕು ಎಂಬ ಪ್ರಶ್ನೆ ಮಾತ್ರ ನನ್ನನ್ನು ಬಹಳವಾಗಿ ಕಾಡಿತು.
Like us!
Follow us!