ಗ್ರೆಂಝ್ ರೇ – ಗ್ರೆಂಝ್ ಅಥವಾ ಅಂಚಿನ ಕಿರಣ – ಕ್ಷ-ಕಿರಣಗಳ ಉದ್ದ ತರಂಗಾಂತರ ಪ್ರದೇಶದಲ್ಲಿ ಉತ್ಪತ್ತಿಯಾಗುವ ಒಂದು ರೀತಿಯ ಕಿರಣಗಳಿವು. 1 ರಿಂದ 10 ಆಂಗ್ ಸ್ಟ್ರಾಮ್ ತರಂಗಾಂತರವನ್ನು ಹೊಂದಿರುತ್ತವೆ. ಇವುಗಳ ಜೀವಶಾಸ್ತ್ರೀಯ ಪರಿಣಾಮವು ಅತಿನೇರಳೆ ಕಿರಣಗಳು ಹಾಗೂ ಸಾಂಪ್ರದಾಯಿಕ ಕ್ಷ-ಕಿರಣಗಳು – ಈ ಎರಡರ ನಡುವಿನ ಪ್ರದೇಶದ ಗುಣಗಳನ್ನು ಹೊಂದಿದ್ದರಿಂದ ಇವುಗಳನ್ನು ಗ್ರೆಂಝ್ (ಜರ್ಮನ್ ಭಾಷೆಯಲ್ಲಿ ಗ್ರೆಂಝ್ ಎಂದರೆ ಅಂಚು ಎಂದು ಅರ್ಥ) ಕಿರಣ ಅಥವಾ ಅಂಚಿನ ಕಿರಣ ಎಂದು ಕರೆಯುತ್ತಾರೆ. ಗುಸ್ತಾವ್ ಪೀಟರ್ ಬಕ್ಕಿ (1880-1963) ಎಂಬ ಜರ್ಮನ್- ಅಮೇರಿಕಾ ಕ್ಷ-ಕಿರಣ ತಜ್ಞರು ಇವುಗಳನ್ನು ಕಂಡುಹಿಡಿದ ಕಾರಣ ಇವುಗಳನ್ನು ಬಕ್ಕಿ ಕಿರಣಗಳು ಎಂದು ಸಹ ಕರೆಯುತ್ತಾರೆ.
ಗ್ರೆಗೋರಿಯನ್ ಟೆಲಿಸ್ಕೋಪ್ – ಗ್ರೆಗೋರಿ ದೂರದರ್ಶಕ – ಹಿಂದಿನ ಕಾಲದ ( 17 ನೇ ಶತಮಾನದ) ಒಂದು ದೂರದರ್ಶಕ ಇದು. ಸ್ಕಾಟ್ಲೆಂಡ್ ನಲ್ಲಿ ತಯಾರಾದದ್ದು. ತಗ್ಗುಗಾಜಿನ ಕನ್ನಡಿ ಮತ್ತು ಉಬ್ಬುಗಾಜಿನ ಕನ್ನಡಿಗಳನ್ನು, ಬೆಳಕು ತನ್ನ ಮೇಲೆಯೇ ಮಡಿಸಿಕೊಳ್ಳುವಂತೆ ಇಟ್ಟು ರೂಪಿಸಿದ ಒಂದು ವ್ಯವಸ್ಥೆ.
ಗ್ರೀನ್ ಹೌಸ್ ಎಫೆಕ್ಟ್ – ಹಸುರು ಮನೆ ಪರಿಣಾಮ – ಭೂಮಿಯ ಮೇಲ್ಮೈಯು ಸೂರ್ಯನ ಬೆಳಕಿನ ಬಹುಭಾಗವನ್ನು ಹೀರಿಕೊಂಡಾಗ, ಈ ಬೆಳಕನ್ನು ಇಂಗಾಲದ ಡೈಆಕ್ಸೈಡ್, ನೀರು ಮತ್ತು ಮೋಡಗಳು ಹೀರಿಕೊಂಡು ಮತ್ತೆ ಭೂಮಿಗೆ ಹೊರಸೂಸುತ್ತವೆ. ಇದರಿಂದಾಗಿ ಭೂಮಿಯ ಉಷ್ಣತೆ ಹೆಚ್ಚಾಗುತ್ತದೆ. ಇಲ್ಲಿ ಭೂಮಿಯು ಗಿಡಗಳನ್ನು ಬೆಳೆಸುವ ಹಸುರುಮನೆಯಂತೆ ವರ್ತಿಸುವುದರಿಂದ ಇದನ್ನು ‘ಹಸುರುಮನೆ ಪರಿಣಾಮ’ ಎನ್ನುತ್ತಾರೆ.
ಗ್ರೇಟ್ ಸರ್ಕಲ್ – ಮಹಾ ವೃತ್ತ – ಒಂದು ಗೋಳದ ಮೇಲಿದ್ದು, ಅದರ ಕೇಂದ್ರವನ್ನು ಹಾದುಹೋಗುವಂತಹ ಮೇಲ್ಮೈಗುಂಟ ಉಂಟಾಗುವ ಯಾವುದಾದರೂ ಒಂದು ವೃತ್ತ. ಭೂಮಧ್ಯರೇಖೆ ಹಾಗೂ ರೇಖಾಂಶಗಳೆಲ್ಲವೂ ಭೂಮಿಯ ಮೇಲ್ಮೈಯಲ್ಲಿರುವ ಮಹಾವೃತ್ತಗಳಾಗಿವೆ.
ಗ್ರೇ, ಸಿಂಬಲ್ Gy – ಗ್ರೇ ಸಂಕೇತ Gy – ಒಂದು ಜೀವಂತ ಅಂಗಾಂಶದೊಳಗೆ ವಿದ್ಯುದಂಶಕಾರಕ( ಅಯಾನೀಕರಣಗೊಳಿಸುವ) ವಿಕಿರಣವು ಹಾದು ಹೋಗುವಾಗ, ಏಕಘಟಕ ದ್ರವ್ಯರಾಶಿಯು ಹೀರಿಕೊಳ್ಳುವ ಒಂದು ಸಲದಳತೆಯ ಶಕ್ತಿಯ, ಎಸ್ಐ ಮೂಲಮಾನವಿದು.
ಗ್ರ್ಯಾವಿಟಿ ವೆಕ್ಟರ್ – ಗುರುತ್ವ ದಿಶಾಯುತ – ಒಂದು ದತ್ತ ಬಿಂದುವಿನಲ್ಲಿ ಏಕಘಟಕ ದ್ರವ್ಯರಾಶಿಗೂ ಅದರ ಮೇಲೆ ವರ್ತಿಸುತ್ತಿರುವ ಬಲಕ್ಕೂ ಇರುವ ಅನುಪಾತ.
Like us!
Follow us!