ಮಕ್ಕಳಿಗೆ ಊಟತಿಂಡಿ ಮಾಡಿ ಹಾಕುವ ತಾಯಂದಿರಿಗೆ ಮಕ್ಕಳ ಬೇಡಿಕೆಗಳನ್ನು ಪೂರೈಸುವ ಸಂದರ್ಭದಲ್ಲಿ ಕೆಲವೊಮ್ಮೆ ನಗೆ ಹುಟ್ಟಿಸುವ ಅನುಭವಗಳಾಗುತ್ತವೆ. ನಮ್ಮ ಮನೆಯಲ್ಲೂ ಇತ್ತೀಚೆಗೆ ಇಂತಹ ಒಂದು ಅನುಭವ ಆಯಿತು.
ನನ್ನ ಚಿಕ್ಕ ಮಗಳು ಪ್ರಣತಿ ತುಂಬ ಸೂಕ್ಷ್ಮವಾದ ರುಚಿಪ್ರಜ್ಞೆ ಇರುವ ಹುಡುಗಿ ; ಕೇವಲ ಪರಿಮಳ ನೋಡಿ ಖಾದ್ಯಪದಾರ್ಥ ತನಗೆ ಬೇಕೋ ಬೇಡವೋ ಎಂದು ನಿರ್ಧರಿಸಿಬಿಡುತ್ತಾಳೆ! ಅವಳು ಎಳೆಯ ಪುಟಾಣಿ ಆಗಿದ್ದಾಗಿನಿಂದಲೂ ಅವಳಿಗೆ ಇಷ್ಟವಾಗುವಂತೆ ತಿಂಡಿ-ಅಡಿಗೆ ಮಾಡುವುದು ನನಗೆ ಮತ್ತು ನಮ್ಮ ಮನೆಗೆಲಸ ಸಹಾಯಕರಾದ ಯಲ್ಲಮ್ಮರಿಗೆ ಸವಾಲಿನ ಸಂಗತಿಯೇ. ಅವಳಿಗಿಷ್ಟವಾಗುವ ಕೆಲವೇ ಖಾದ್ಯಗಳನ್ನು ಬಹು ಕಾಳಜಿ ವಹಿಸಿ ಮಾಡಿ ಅವಳು ಖುಷಿ ಪಡುತ್ತಾ ತಿಂದರೆ, ‘ಅಬ್ಬ! ಇವತ್ತಿನ ಸವಾಲನ್ನು ಗೆದ್ದೆವು’ ಎಂದು ಸಮಾಧಾನ ಪಟ್ಟುಕೊಳ್ಳುವ ಸನ್ನಿವೇಶ ನಮ್ಮದು.
ಎಲ್ಲರಿಗೂ ಗೊತ್ತಿರುವಂತೆ ಚಿತ್ರಾನ್ನ ಎಂಬುದು ಬೇಗ ಮಾಡಿಕೊಳ್ಳಬಹುದಾದ ಒಂದು ಸುಲಭದ ತಿಂಡಿ. ರುಚಿಯಾಗಿ ಚಿತ್ರಾನ್ನ ಮಾಡುವುದು(ಹಾಗೆ ನೋಡಿದರೆ ಯಾವುದೇ ತಿಂಡಿಯನ್ನು ಮಾಡುವುದು) ಒಂದು ಕಲೆಯೇ ಸರಿ. ಆದರೂ, ಮೇಲೆ ಪ್ರಸ್ತಾಪಿಸಿದ ನಮ್ಮ ಮನೆಯ ಪುಟಾಣಿಗೆ ಸರಳ ಚಿತ್ರಾನ್ನಕ್ಕೆ ಬಟಾಣಿ ಹಾಕಿಕೊಟ್ಟರೆ ಇಷ್ಟವಾಗುತ್ತೆ. ನಮ್ಮ ಯಲ್ಲಮ್ಮ ಬಾಂಡಲೆಯಲ್ಲಿ ಎಣ್ಣೆಯಿಟ್ಟು ಸಾಸಿವೆ, ಇಂಗು, ಧಾರಾಳವಾಗಿ ಕಡಲೆಬೇಳೆ – ಉದ್ದಿನಬೇಳೆ, ಉದ್ದುದ್ದಕ್ಕೆ ಹಾಗೂ ತೆಳ್ಳಗೆ ಹಚ್ಚಿದ ಹಸಿಮೆಣಸು, ಅರಿಶನ, ಅಹ ಎನ್ನುವಷ್ಟು ಹುಳಿ ಕೊಡುವ ನಿಂಬೆಹಣ್ಣಿನ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಿತ್ರಾನ್ನದ ಒಗ್ಗರಣೆಯನ್ನು ಹದವಾಗಿ ತಯಾರಿಸುತ್ತಾರೆ. ಪ್ರಣತಿ ಪುಟ್ಟಿಗೋಸ್ಕರ ಇದರಲ್ಲಿ ಹಸಿ ಬಟಾಣಿ ಸೇರುತ್ತೆ.
ಮೊನ್ನೆ ಮನೆಯಲ್ಲಿ ಈ ಬಟಾಣಿ ಚಿತ್ರಾನ್ನ ಮಾಡಿದ್ದೆವು. ಸರಿ, ತನ್ನ ‘ವಾಸ್ತವ ತರಬೇತಿ ಶಿಕ್ಷಣ'( ಇಂಟರ್ನ್ಶಿಪ್) ಕ್ಕೆ ಬೆಳಿಗ್ಗೆ ಎಂಟು ಗಂಟೆಗೆ ಹೊರಡುವ ಪ್ರಣತಿಯನ್ನು ತಿಂಡಿ ತಿನ್ನಲು ಕರೆದ ಯಲ್ಲಮ್ಮ ‘ತಗೋ ಪುಟ್ಟಿ, ಬಟಾಣಿ ಚಿತ್ರಾನ್ನ’ ಎಂದು ಹೇಳಿ, ತಿಂಡಿ ತಟ್ಟೆ ಕೊಟ್ಟರು. ತಟ್ಟೆ ತೆಗೆದುಕೊಂಡ ಪ್ರಣತಿ “ಅಮ್ಮ ( ಯಲ್ಲಮ್ಮನನ್ನು ಸಹ ಅಮ್ಮ ಎಂದೇ ಪ್ರೀತಿಯಿಂದ ಸಂಬೋಧಿಸುತ್ತಾಳೆ ನನ್ನ ಮಗಳು) ಇನ್ನೂ ಬಟಾಣಿ ಹಾಕು” ಅಂದಳು. ಯಲ್ಲಮ್ಮ “ಇಷ್ಟೇ ಬಟಾಣಿ ಇದ್ದಿದ್ದು ಪ್ರಣು, ಮುಂದಿನ ಸಲ ಜಾಸ್ತಿ ಹಾಕ್ತೀನಮ್ಮ” ಅಂದರು. ಪ್ರಣತಿ “ಹೂಂ, ನಂಗೆ ಜಾ…..ಸ್ತಿ ಬಟಾಣಿ ಹಾಕಮ್ಮ. ಚಿತ್ರಾನ್ನದ ತುಂಬ ಬರೀ ಬಟಾಣೀನೆ ಕಾಣಿಸ್ಬೇಕು. ಆಗ ಅದನ್ನ ಚಿತ್ರಾನ್ನ ಅನ್ನಕ್ಕೆ ಆಗಲ್ವೇನೊ! ಚಿತ್ರಬಟಾಣಿ ಅನ್ಬೇಕು” ಅಂದಳು. ಕಾಲೇಜಿಗೆ ಹೊರಡುತ್ತಿದ್ದ ನನಗೆ, ಯಲ್ಲಮ್ಮನಿಗೆ ಮತ್ತು ರವಿಗೆ( ಪ್ರಣತಿಯ ಅಪ್ಪ) ತುಂಬ ನಗು ಬಂತು. ಎಲ್ಲರೂ ಮನಸಾರೆ ನಕ್ಕು ‘ಮುಂದಿನ ಸಲ ಪ್ರಣತಿಗೆ ಚಿತ್ರಬಟಾಣಿ ಮಾಡಿಕೊಡೋಣ’ ಎಂದು ಪರಸ್ಪರ ಹೇಳಿಕೊಂಡೆವು. “ಹೊಸ ತಿಂಡಿ ಹುಡುಕಿ ಬಿಟ್ಯಲ್ಲ ಪುಟ್ಟಿ, ನೀನು ಚಿತ್ರಬಟಾಣಿ ಕೇಳಿದ ಪುಟಾಣಿ” ಅಂದೆ. “ಹೋಗಮ್ಮ, ನಾನೇನು ಈಗ ಪುಟಾಣಿ ಅಲ್ಲ, ದೊಡ್ಡವಳಾಗಿದೀನಿ” ಎಂದು ಹುಸಿಮುನಿಸು ತೋರಿದ ಪ್ರಣತಿ ತಾನೂ ನಕ್ಕಳು.