ದ ಮತ್ತು ಧ ಕಾರಗಳು ವಿದ್ಯಾರ್ಥಿಗಳಿಗೆ ಮಾಡುವ ಗೊಂದಲ ಅಷ್ಟಿಷ್ಟಲ್ಲ. ವಿದ್ಯಾರ್ಥಿ ಎಂದು ಬರೆಯಬೇಕಾದಾಗ ವಿಧ್ಯಾರ್ಥಿ ಎಂದು ಬರೆಯುವುದು, ಧನಲಕ್ಷ್ಮಿ ಎಂದು ಬರೆಯಲು ದನಲಕ್ಷ್ಮಿ ಎಂದು ಬರೆಯುವುದು, ಆದ್ಯತೆ ಎಂದು ಬರೆಯಬೇಕಾದಾಗ ಆಧ್ಯತೆ ಎಂದು ಬರೆಯುವುದು, ಧನ್ಯವಾದ ಎಂದು ಬರೆಯಬೇಕಾದಲ್ಲಿ ದನ್ಯವಾದ ಎಂದು ಬರೆಯುವುದು……,ಹೀಗೆ. ಇದಕ್ಕೆ ಇರುವ ಒಂದೇ ಪರಿಹಾರ ಅಂದರೆ ವಿದ್ಯಾರ್ಥಿಗಳು ಉಚ್ಚಾರಕ್ಕೆ ಗಮನ ಕೊಡುವಂತೆ ಮಾಡಿ ಆ ಪದಗಳ ಅರ್ಥ ವ್ಯತ್ಯಾಸವನ್ನು ಅವರಿಗೆ ತಿಳಿಸಿಕೊಡುವುದು. ಇದು ಶಾಲೆಯಲ್ಲಿ ಅಧ್ಯಾಪಕರು ಮತ್ತು ಮನೆಯಲ್ಲಿ ತಂದೆತಾಯಿಗಳು ಮಾಡಬೇಕಾದ ಕೆಲಸ.
ಮೂಲತಃ ಇದು ಅಲ್ಪಪ್ರಾಣ, ಮಹಾಪ್ರಾಣಗಳನ್ನು ಬರೆಯುವಾಗ ಆಗುವ ತಪ್ಪು. ಇಂತಹ ತಪ್ಪುಗಳು ಶಾಲಾ ಕಾಲೇಜುಗಳ ತರಗತಿಗಳಲ್ಲಿ ಮಾತ್ರ ಆಗುತ್ತವೆ ಎಂದೇನಲ್ಲ. ಬಸ್ಸು, ರೈಲು, ಆಟೋರಿಕ್ಷಾ ಮುಂತಾದ ವಾಹನಗಳಲ್ಲಿನ ಬರವಣಿಗೆ, ವಿವಿಧ ಉದ್ದೇಶಗಳಿಗಾಗಿ ರಸ್ತೆ ಬದಿಗಳಲ್ಲಿ ಹಾಕುವ ಪ್ರಕಟಣಾ ಫಲಕಗಳು, ಹೋಟಲು-ಅಂಗಡಿಗಳ ನಾಮ ಫಲಕಗಳು, ವಿದ್ಯುನ್ಮಾನ ಮಾಧ್ಯಮಗಳಲ್ಲಿನ ಪ್ರಕಟಣೆ, ಸುದ್ದಿಸಾಲುಗಳು… ಇಂತಹ ಕಡೆಯೂ ಆಗುತ್ತವೆ.
ಉದಾಹರಣೆಗೆ – ಕಡ್ಡಾಯವನ್ನು ಖಡ್ಡಾಯ ಎಂದು ಬರೆಯುವುದು, ನಿಗದಿತ ಬರೆಯಲು ನಿಗಧಿತ ಎಂದು ಬರೆಯುವುದು, ಸ್ತಂಭ ಎಂದು ಬರೆಯಲು ಸ್ಥಂಭ ಎಂದು ಬರೆಯುವುದು…ಹೀಗೆ.
ನಮ್ಮ ಒಟ್ಟು ಜನಜೀವನವನ್ನೇ ಈ ಭಾಷಾ ಶೈಥಿಲ್ಯ ಆವರಿಸಿಬಿಟ್ಟಿದೆಯೇ ಎಂಬ ಆತಂಕವು ಅಧ್ಯಾಪಕರನ್ನು ಮತ್ತು ಕನ್ನಡಪ್ರಿಯರನ್ನು ಕಾಡುವುದು ಸುಳ್ಳಲ್ಲ. ಈ ವಿಷಯದಲ್ಲಿ ಸಂಬಂಧ ಪಟ್ಟವರು ಎಚ್ಚರಿಕೆ ವಹಿಸಬೇಕು.