ಸಾಹಿತ್ಯ-ಸಂಗೀತಗಳಲ್ಲಿ ಆಸಕ್ತಿ ಇರುವವರನ್ನು ಕಾಡುವ ಒಂದು ಕುತೂಹಲಕರ ಪ್ರಶ್ನೆ ಇದು. ಹಾಡುಗಳ ತಯಾರಿಯಲ್ಲಿ‌ ರಾಗ ಮೊದಲೋ ಅಥವಾ ಪದಸೃಷ್ಟಿ ಮೊದಲೋ? ಎಂಬುದು.‌ ಇಲ್ಲಿನ ಸ್ವಾರಸ್ಯಕರ ಸಂಗತಿ‌ ಅಂದರೆ ಕೆಲವು ಸಲ ಮಾತು ಮೊದಲು –  ಭಾವಗೀತೆಗಳಲ್ಲಿ ಆಗುವಂತೆ, ಕೆಲವು ಸಲ ರಾಗ ಮೊದಲು – ಸಿನಿಮಾ ಹಾಡುಗಳಲ್ಲಿ ಆಗುವಂತೆ. ಇನ್ನು ಹಳೆಯ ಜಾನಪದ ಧಾಟಿಗಳು ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬರುತ್ತಾ ಹೋದಂತೆ, ಪ್ರತಿ‌ ಹೊಸ ಪೀಳಿಗೆಯೂ ಅದಕ್ಕೆ ತನ್ನದೇ ಆದ ಶಬ್ದಗಳನ್ನು ಸೇರಿಸುತ್ತದೆ, ಅಂದರೆ ಇಲ್ಲಿ ರಾಗ ಮೊದಲು. ಇನ್ನು ಕೆಲವು ಸಂಗೀತ ಬಲ್ಲ ಕವಿಗಳು, ವಾಗ್ಗೇಯಕಾರರು ಮಾತು, ರಾಗ ಒಟ್ಟಿಗೇ ತಮ್ಮಲ್ಲಿ ಮೂಡುತ್ತವೆ ಅನ್ನುತ್ತಾರೆ! ಒಟ್ಟಿನಲ್ಲಿ ಹಾಡುಗಳು ಎಷ್ಟು ಮಾಂತ್ರಿಕವೋ ಅವುಗಳ ಸೃಷ್ಟಿಯೂ ಅಷ್ಟೇ ಮಾಂತ್ರಿಕ ಅನ್ನಬಹುದು. ‘ಆನು ಒಲಿದಂತೆ ಹಾಡುವೆ’ ಎಂದು ಬಸವಣ್ಣನವರು ಹೇಳಿದ್ದು ಈ ವಿಷಯದ ಹಿನ್ನೆಲೆಯಲ್ಲಿ ಎಷ್ಟು ಅರ್ಥಗಳನ್ನು‌ ಕೊಡುತ್ತದೆ, ಅಲ್ಲವೇ?