ಭಾಷಾಜೀವನವೇ ಹಾಗೆ ನೋಡಿ. ಸಾಮಾನ್ಯಸಾಧಾರಣ ಎಂಬಂತಹ ದಿನಗಳಲ್ಲಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ಹೊಸಪದವೊಂದು ಕಿವಿಗೆ ಬಿದ್ದು ಅಹ! ಅನ್ನಿಸುವಂತಾಗುತ್ತೆ. ಮೂರು ದಶಕಗಳ ಹಿಂದೆ ನನ್ನ ಕಿವಿಗೆ ಬಿದ್ದ ಹೊಸಪದವೊಂದು ಈಗಲೂ ನೆನೆದಾಗ ಅದು ತರುವ ಸಂತೋಷದಿಂದಾಗಿ, ಈ ಕನ್ನಡ ಪ್ರಸಂಗವನ್ನು ಬರೆಯುವಂತೆ ಮಾಡಿದೆ.
ನಾನು ಉದ್ಯೋಗಿನಿಯಾಗಿದ್ದು ಮನೆಯಲ್ಲಿ ಮಗು ನೋಡಿಕೊಳ್ಳಬಲ್ಲ ಕುಟುಂಬ ಸದಸ್ಯರು ಯಾರೂ ಇರದಿದ್ದ ಕಾರಣ, ನನ್ನ ಮೊದಲ ಮಗು ಹುಟ್ಟಿದಾಗ ದಾದಿಯೊಬ್ಬರ ಅಗತ್ಯ ಬಂತು. ನಮ್ಮ ಪರಿಚಿತರೊಬ್ಬರು ತುಮಕೂರು ಕಡೆಯಿಂದ, ತಮಗೆ ಗೊತ್ತಿದ್ದ ಒಬ್ಬ ಮಹಿಳೆಯನ್ನು ದಾದಿಯ ಕೆಲಸ ಮಾಡಲೆಂದು, ನಮ್ಮ ಮನೆಗೆ ಕರೆದುಕೊಂಡು ಬಂದರು. ಅವರು ಬಂದಾಗಲೇ ರಾತ್ರಿ ಎಂಟು ಗಂಟೆ ಆಗಿತ್ತು. ಮಗುವನ್ನು ಪರಿಚಯಿಸಿ, ಸಂಬಳ ಇತ್ಯಾದಿಗಳ ಬಗ್ಗೆ ಮಾತಾಡಿ, ನಮ್ಮ ಜೀವನಶೈಲಿಯನ್ನು ಕುರಿತು ಹೇಳಿ, ಎಲ್ಲರೂ ಊಟ ಮುಗಿಸುವಷ್ಟರಲ್ಲಿ ರಾತ್ರಿ ಹತ್ತು ಗಂಟೆ ಆಗಿಯೇಬಿಟ್ಟಿತು. ಬಂದ ಇಬ್ಬರಿಗೂ ಪ್ರಯಾಣ ಮಾಡಿ ಸಾಕಾಗಿದ್ದಿರಬೇಕು. ಮಲಗಲೆಂದು ಹೊರಟ ಆ ಹೆಂಗಸು ನನ್ನ ಪರಿಚಿತರ ಬಳಿ ‘ಏ…ಬೇಗ್ನೆ ಒಂದ್ ತಲ್ಮೂಟೆ ತತ್ತಾ, ಭಾಳ ನಿದ್ದೆ ಬರ್ತಾ ಇದೆ ನಂಗೆ’ ಅಂದರು. ಆ ಪರಿಚಿತರು ‘ತಗೋ’ ಎಂದು ಒಂದು ತಲೆದಿಂಬನ್ನು ಆಕೆಗೆ ಕೊಟ್ಟರು. ಅವರ ಸಂಭಾಷಣೆಯನ್ನು ಗಮನಿಸುತ್ತಿದ್ದ ನನಗೆ ತಲ್ಮೂಟೆ ಎಂಬ ಪದ ಮತ್ತು ಅದಕ್ಕಿದ್ದ ತಲ್ದಿಂಬು( ತಲೆದಿಂಬು) ಎಂಬ ಅರ್ಥವನ್ನು ತಿಳಿದು ಬಹಳ ಆಶ್ಚರ್ಯ ಆಯಿತು. ತಲೆಯ ಕೆಳಗೆ ಇಟ್ಟುಕೊಳ್ಳುವ ಮೂಟೆ ತಲೆಮೂಟೆ! ಅಬ್ಬ! ನಮ್ಮ ಕನ್ನಡ ಎಷ್ಟು ಸರಳ, ಎಷ್ಟು ಸುಂದರ ಮತ್ತು ಕಾರ್ಯೋದ್ದೇಶವುಳ್ಳ ಭಾಷೆ ಅಲ್ವಾ ಅನ್ನಿಸಿತು! ನಮ್ಮ ಗ್ರಾಮೀಣ ಪ್ರದೇಶದವರ ಭಾಷೆಯ ಸಹಜ ಶ್ರೀಮಂತಿಕೆಯ ಬಗ್ಗೆ ಸಂತೋಷ ಸಹ ಆಯಿತು.
ಅಂದ ಹಾಗೆ, ಇದೇ ತರ್ಕದ ಪ್ರಕಾರ ಹೆಲ್ಮೆಟ್ ಗೆ ತಲ್ಮರೆ (ತಲೆಯನ್ನು ಮರೆ ಮಾಡುವ ವಸ್ತು – ಚಪ್ಪಲಿಗೆ ಹಳ್ಳಿಗರು ಕಾಲ್ಮರಿ – ಅಂದರೆ ‘ಕಾಲ್ಮರೆ’ ಪದದ ರೂಪಾಂತರ) ಅನ್ನಬಹುದೇ ಎಂಬ ಪ್ರಶ್ನೆ ನನ್ನಲ್ಲಿ ಸುಳಿಯಿತು. ಹೀಗನ್ನೋಣವೇ? ನಿಮ್ಮ ಅನಿಸಿಕೆ ಏನು? ಬೇಗ್ನೆ ಹೇಳಿ ಮತ್ತೆ.…