ಭಾಷಾ ತರಗತಿಗಳು ಭಾವರಹಿತವಾದರೆ ಅವು ಪರಿಣಾಮಕಾರಿಯಾಗುವುದಿಲ್ಲ. ಒಬ್ಬ ಕನ್ನಡ ಅಧ್ಯಾಪಕಿಯಾಗಿ ನಾನು ಭಾವಿಸಿದ ಹಾಗೂ ಜೀವಿಸಿದ ಅನುಭವವಿದು.
ಭಾಷೆಯು ಸಾಹಿತ್ಯದ ಸಂದರ್ಭದಲ್ಲಿ ಅಥವಾ ಸಂವಹನ ಸಂದರ್ಭದಲ್ಲಿ ಬಳಕೆಯಾಗುವಾಗ ಭಾವಭರಿತವಾದ ರೂಪ, ಆಕಾರಗಳನ್ನು ಹೊಂದಿರುತ್ತದೆ. ವಿಜ್ಞಾನ, ವಾಣಿಜ್ಯ, ತರ್ಕ ಮುಂತಾದ ವಿಷಯಗಳನ್ನು ಬೋಧಿಸುವಾಗ ಅಥವಾ ಬರೆಯುವಾಗ ಭಾಷೆಯು ತನ್ನ ಭಾವರೂಪವನ್ನು ಹಿಂದಿಟ್ಟು ಜ್ಞಾನರೂಪವನ್ನು ಮುಂದಿಡುತ್ತದೇನೋ.
ಆದರೆ ಕನ್ನಡ ಅಥವಾ ಯಾವುದೇ ಭಾಷಾ/ಸಾಹಿತ್ಯ ತರಗತಿಗಳಲ್ಲಿ ಅದು ಭಾವರೂಪಿಯಲ್ಲದೇ ಹೋದರೆ ತಾನು ಹೇಳಬೇಕಾದುದನ್ನು ಸಮರ್ಥವಾಗಿ ಹೇಳಲಾಗದು.
ಅಕ್ಷರ, ಪದ, ವಾಕ್ಯಗಳನ್ನು ಉಚ್ಚರಿಸುವಾಗ ಅವುಗಳ ಹಿನ್ನೆಲೆಯ ಶಕ್ತಿಯಾಗಿರುವ ಭಾವವನ್ನು ಭಾಷಾ ಅಧ್ಯಾಪಕರು ತಮ್ಮೊಳಗೆ ಆವಾಹಿಸಿಕೊಂಡು ವಿದ್ಯಾರ್ಥಿಗಳಿಗೆ ತಲುಪಿಸಬೇಕಾಗುತ್ತದೆ. ಉದಾಹರಣೆಗೆ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಅಥವಾ ‘ ಸಾಮಾನ್ಯನೇ ಈ ಗಾಂಧಿ’ ಎಂಬ ವಾಕ್ಯಗಳನ್ನು ಉಚ್ಚರಿಸುವಾಗ ಯಾವ ಪದದ ಮೇಲೆ ಸ್ವರಭಾರ ಅಥವಾ ಒತ್ತನ್ನು ಹಾಕುವೆವೋ ಅದಕ್ಕೆ ತಕ್ಕಂತೆ ಅದರ ಅರ್ಥ ಬದಲಾಗುವುದನ್ನು ಗಮನಿಸಬಹುದು. ಹಾಗೆಯೇ ಒಂದು ಸಣ್ಣಕಥೆ, ನಾಟಕ ಅಥವಾ ಕಾದಂಬರಿಯನ್ನು ಪಾಠ ಮಾಡುವಾಗ ‘ಛಿ, ಹೋಗು. ಮೊದಲು ಇಲ್ಲಿಂದ ತೊಲಗು ನೀನು!’ ಎನ್ನುವ ವಾಕ್ಯ ಬಂದಾಗ ಆ ವಾಕ್ಯದ ಭಾವವಾಗಿರುವ ಸಿಟ್ಟು, ತಿರಸ್ಕಾರ, ಅಸಹ್ಯ ಮುಂತಾದ ಭಾವಗಳು ಅಧ್ಯಾಪಕರ ಧ್ವನಿಯಲ್ಲಿ ಪ್ರಕಟವಾಗಿ ವಿದ್ಯಾರ್ಥಿಗಳನ್ನು ಮುಟ್ಟಬೇಕು. ಆಗಲೇ ಆ ವಾಕ್ಯದ ಅರ್ಥ ಪ್ರಕಟಗೊಳ್ಳುವುದು, ಅಲ್ಲವೇ? ಇನ್ನು ಸ್ವತಃ ವಿದ್ಯಾರ್ಥಿಗಳು ಕವಿತೆಯನ್ನು/ಗದ್ಯಸಾಹಿತ್ಯವನ್ನು ವಾಚಿಸುವಾಗ ಅಥವಾ ಓದುವಾಗ ಅವು ಅದರ ಭಾವವನ್ನು ಹಿಡಿದು ವಾಚಿಸುವಂತೆ ಅಥವಾ ಓದುವಂತೆ ಅಧ್ಯಾಪಕರು ಅವರಿಗೆ ಸೂಚಿಸಬೇಕು. ಭಾವವೇ ಇಲ್ಲದೆ, ಸತ್ತ ವ್ಯಕ್ತಿಯ ಹೃದಯ ಸ್ಥಿತಿ ತೋರುವ ಸಪಾಟುರೇಖೆಯಂತಿದ್ದರೆ ಅದೊಂದು ಭಾಷಾ/ಸಾಹಿತ್ಯ ತರಗತಿ ಹೇಗಾದೀತು?
ಇದೇ ರೀತಿಯಲ್ಲಿ ಬರಹದಲ್ಲಿ ಮಾತ್ರವಲ್ಲದೆ ಉಚ್ಚಾರದಲ್ಲೂ ಲೇಖನಚಿಹ್ನೆಗಳ/ವಿರಾಮ ಚಿಹ್ನೆಗಳ ಬಳಕೆಯು ಭಾವ ಪ್ರಕಟಣೆಯಲ್ಲಿ ತುಂಬ ಮುಖ್ಯವಾಗುತ್ತದೆ. ಜೊತೆಗೆ ಪದ್ಯಗಳ ಲಯ/ಧಾಟಿ/ಛಂದಸ್ಸು ಇವು ಸಹ ಅಧ್ಯಾಪಕರ ದನಿಯಲ್ಲಿ ಅಭಿನೀತವಾದಾಗ ಮಾತ್ರ ವಿದ್ಯಾರ್ಥಿಗಳಿಗೆ ಆ ಕವಿತೆಯ ಪೂರ್ಣ ಅನುಭವ/ಅರ್ಥಗಳು ವೇದ್ಯವಾಗುವಂಥದ್ದು.
ಶೇಕ್ಸ್‌ಪಿಯರ್ ಮಹಾಶಯರು ಒಂದೆಡೆ ಹೇಳಿದ್ದಾರೆ – ಹೃದಯದಿಂದ ಹೊರಟದ್ದು ಹೃದಯವನ್ನು ಮುಟ್ಟುತ್ತೆ’ ಎಂದು. ಬಹುಶಃ ಈ ಮಾತನ್ನು ನಾವು ಭಾಷಾ ಅಧ್ಯಾಪಕರು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ಅನ್ನಿಸುತ್ತೆ