ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವ ಕಾರ್ಯದಲ್ಲಿ ಬಹು ಮುಖ್ಯವಾದ ಭಾಗವೆಂದರೆ ಅದನ್ನು ಬಳಸುವುದು. ಈ ಹೇಳಿಕೆಯು ಕೇಳಲು ಬಹಳ ಸರಳ ಅನ್ನಿಸಿದರೂ, ನಮ್ಮ ನಗರಗಳ ವಾಸ್ತವಿಕ ಸನ್ನಿವೇಶಗಳಿಂದಾಗಿ ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇದೆ. ಔದ್ಯೋಗಿಕ ವಲಸೆಗಳಿಂದ ನಗರಗಳಲ್ಲಿ ಕನ್ನಡೇತರರ ಸಂಖ್ಯೆ ಹೆಚ್ಚಾಗಿರುವುದು, ಇನ್ನೂ ಹೆಚ್ಚುತ್ತಿರುವುದು ಒಂದೆಡೆಯಾದರೆ, ಆಂಗ್ಲ ಮಾಧ್ಯಮದ ಶಿಕ್ಷಣದಿಂದ ಹಾಗೂ ‘ಇಂಗ್ಲಿಷ್ ಭಾಷೆಯನ್ನು ಬಳಸುವುದು ಸಾಮಾಜಿಕ, ಆರ್ಥಿಕ ನೆಲೆಯಲ್ಲಿನ ಪ್ರತಿಷ್ಠೆ’ ಎಂಬ ಭಾವನೆಯು ನಮ್ಮ ಜನಮಾನಸದಲ್ಲಿ ಬೇರೂರಿರುವುದರಿಂದ, ಕನ್ನಡದ ಬಳಕೆಯು ನಮ್ಮ ನಗರಗಳ ಯುವಪೀಳಿಗೆ ಮತ್ತು ಮಕ್ಕಳಲ್ಲಿ ದಿನೇದಿನೇ ಕಡಿಮೆ ಆಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಕನ್ನಡ ಭಾಷೆಯನ್ನು ಉಳಿಸುವಲ್ಲಿ ಆದ್ಯ ಪಾತ್ರ ವಹಿಸಬೇಕಾಗಿರುವವರೆಂದರೆ ಕನ್ನಡ ಅಧ್ಯಾಪಕರು.
ಶಿಶುವಿಹಾರದಿಂದ ವಿಶ್ವವಿದ್ಯಾಲಯದ ತನಕ ಎಲ್ಲ ಹಂತಗಳ ಕನ್ನಡ ಅಧ್ಯಾಪಕರು ಇಂದು ಪ್ರಜ್ಞಾಪೂರ್ವಕವಾಗಿ ಗರಿಷ್ಠ ಕನ್ನಡವನ್ನು ಬಳಸಬೇಕಿದೆ. ‘ಅವರು ಬಳಸುತ್ತಿಲ್ಲವೆ?’ ಎಂಬ ಪ್ರಶ್ನೆಗೆ ‘ಬಳಸುತ್ತಿದ್ದಾರೆ, ಆದರೆ ನಗರಗಳ ಇತರರು ಮಾತಾಡುವಂತೆ ಕಂಗ್ಲಿಷ್ ಬಳಸುತ್ತಾರೆ’ ಎಂಬ ಉತ್ತರ ಸಿಗುತ್ತದೆ ನಮಗೆ. ಇದಕ್ಕೆ ಕೆಲವು ಅಪವಾದಗಳಿರಬಹುದೆಂದು ನಾನು ಬಲ್ಲೆ. ಆದರೆ ಸಾಮಾನ್ಯವಾಗಿ ಈ ನನ್ನ ಗಮನಿಕೆ( observation) ನಿಜ.
ಕನ್ನಡ ಅಧ್ಯಾಪಕರು ಕಂಗ್ಲಿಷ್ನಲ್ಲಿ ಅಲ್ಲ ಕನ್ನಡದಲ್ಲಿ ಮಾತಾಡಬೇಕು. ನಲ್ಬೆಳಗು, ನಲ್ಸಂಜೆ, ಶುಭ ವಿದಾಯ, ತರಗತಿ, ವೇಳಾಪಟ್ಟಿ, ಕಿರುಪರೀಕ್ಷೆ, ನಿಯೋಜಿತ ಕಾರ್ಯ, ಸಮಯ, ಗಂಟೆ, ನಿಮಿಷ, ಪಾಠ, ಪದ್ಯ, ಕವಿತೆ, ಫಲಿತಾಂಶ, ಬೇಗ, ನಿಧಾನ, ತಡ, ಹಾಜರಿ, ಸೀಮೆಸುಣ್ಣ, ಕರಿಹಲಗೆ, ಗುರುತಿನ ಚೀಟಿ, ಧನ್ಯವಾದಗಳು ..… ಇಂತಹ ಪದಗಳನ್ನು( ಗಮನಿಸಿ : ಅವುಗಳ ಇಂಗ್ಲಿಷ್ ಸಂವಾದಿಗಳನ್ನಲ್ಲ) ತಮ್ಮ ತರಗತಿಗಳಲ್ಲಿ ಹಾಗೂ ವಿದ್ಯಾರ್ಥಿಗಳ ಜೊತೆಗಿನ ತರಗತಿಯಾಚೆಗಿನ ಒಡನಾಟದಲ್ಲಿ ಬಳಸಬೇಕು. ಕನ್ನಡತನ ಕೇವಲ ಪಠ್ಯಭಾಗದಲ್ಲಿ ಮಾತ್ರವಲ್ಲ, ಅವರ ಭಾಷೆಯಲ್ಲೂ ಕಾಣಿಸಬೇಕು.
ಕನ್ನಡ ಅಧ್ಯಾಪಕರು ಪ್ರತಿ ವರ್ಷವೂ ನೂರಾರು-ಸಾವಿರಾರು ಸಂಖ್ಯೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಅಂದರೆ ಗಾಢ ಮನೋಮೂಡಿಕೆ ಉಂಟಾಗುವ ವಯಸ್ಸಿನ( impressionable age) ಮನುಷ್ಯರನ್ನು ಭೇಟಿ ಆಗುವುದರಿಂದ, ತರಗತಿಗಳಲ್ಲಿ ಮತ್ತು ಅಧ್ಯಾಪಕರೊಂದಿಗಿನ ಒಡನಾಟದಲ್ಲಿ, ಮಕ್ಕಳು ಕೇಳಿಸಿಕೊಳ್ಳುವ ಹಾಗೂ ಆಲಿಸುವ ಕನ್ನಡವು ಗರಿಷ್ಠ ಕನ್ನಡವಾಗಿರುವುದು ಬಹು ಮುಖ್ಯ. ಇಂತಹ ಗರಿಷ್ಠ ಕನ್ನಡ ಬಳಸಿದರೆ ಮಕ್ಕಳ ಕಿವಿಯ ಮೇಲೆ ಹೆಚ್ಚು ಹೆಚ್ಚು ಕನ್ನಡ ಪದಗಳು ಬಿದ್ದು ಅವರ ಕನ್ನಡದ ಪದಸಂಪತ್ತು ಹೆಚ್ಚುತ್ತದೆ ಹಾಗೂ ಕನ್ನಡ ಭಾಷೆಯ ಬಗೆಗಿನ ಅವರ ಅರಿವು, ಅಭಿಮಾನ ಕೂಡ ಹೆಚ್ಚುತ್ತವೆ. ಈ ದೃಷ್ಟಿಯಿಂದ ನೋಡಿದಾಗ ಕನ್ನಡ ಅಧ್ಯಾಪಕರು ಕನ್ನಡ ಸಂವರ್ಧನಾ ಸರಪಣಿಯ ಬಹುಮುಖ್ಯ ಕೊಂಡಿಯಾಗುತ್ತಾರೆ.
ಬನ್ನಿ, ಕನ್ನಡ ಅಧ್ಯಾಪಕ ಮಿತ್ರರೇ, ಗರಿಷ್ಠ ಕನ್ನಡ ಬಳಸೋಣ. ಕನ್ನಡ ತಾಯಿಗೆ ನಾವು ಮಾತ್ರ ಸಲ್ಲಿಸಬಹುದಾದ ವಿಶಿಷ್ಟ ಸೇವೆ ಸಲ್ಲಿಸೋಣ.
Like us!
Follow us!