ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ…ತರಗತಿಯ ಹಂತ ಯಾವುದೇ ಇರಲಿ, ಕನ್ನಡ ಅಧ್ಯಾಪಕರು ಮಾತ್ರ ಮಾಡಬಹುದಾದ ಮತ್ತು ಕನ್ನಡಕ್ಕೆ ಈ ಸನ್ನಿವೇಶದಲ್ಲಿ ಅತ್ಯಂತ ಜರೂರಾಗಿ ಆಗಬೇಕಾದ ಕನ್ನಡದ ಕೆಲಸವೊಂದಿದೆ. ಅದೇನೆಂದರೆ, ಅವರು ತಮ್ಮ ಮಾತಿನಲ್ಲಿ ಮತ್ತು ಪಾಠದಲ್ಲಿ ಗರಿಷ್ಠ ಸಂಖ್ಯೆಯ ಕನ್ನಡ ಪದಗಳನ್ನು ಬಳಸುವ ಕೆಲಸ. ‘ ಇದರಲ್ಲಿ ಏನು ವಿಶೇಷ ಇದೆ? ಕನ್ನಡ ಅಧ್ಯಾಪಕರು ಆಡೋದೇ ಕನ್ನಡ ‌ಭಾಷೆ ಅಲ್ವಾ? ಬಳಸೋದೇ ಕನ್ನಡ ಪದಗಳಲ್ವಾ?’ ಎಂಬ ಪ್ರಶ್ನೆ ಹುಟ್ಟಬಹುದು. 

ಜಾಗತೀಕರಣದ ನಂತರದ ಕನ್ನಡನಾಡಿನ ನಗರಗಳಲ್ಲಿ ( ಮುಖ್ಯವಾಗಿ ಬೆಂಗಳೂರು- ಮೈಸೂರು ಮುಂತಾದ ಉದ್ಯಮಶೀಲ ಸ್ಥಳಗಳಲ್ಲಿ) ಬದುಕು ಆರ್ಥಿಕ, ಸಾಮಾಜಿಕ ದೃಷ್ಟಿಯಿಂದ ತುಂಬ ಬದಲಾಗಿದ್ದು, ಇದರ ಪರಿಣಾಮ ಒಟ್ಟು ಸಮಾಜದ ಮೇಲೆ ಆಗಿದೆ. ಭಾಷೆಯ ಭಾವನಾತ್ಮಕ, ಸಾಂಸ್ಕೃತಿಕ ಮಹತ್ವ ಕಡಿಮೆಯಾಗುತ್ತಾ, ಅದು ಒಂದು ಬಳಕೆಗಿರುವ ಉಪಕರಣ ಮಾತ್ರ ಎಂಬ ಮನೋನೆಲೆ ಮೂಡಿದೆ ( ಲಾಭದೃಷ್ಟಿಯೇ ಮುಖ್ಯವಾದ ಕೊಳ್ಳುಬಾಕ ಸಂಸ್ಕೃತಿಗಳು ಹಬ್ಬುವಾಗ ಹೀಗಾಗುವುದು ಆಶ್ಚರ್ಯವಲ್ಲ). ಉದಾಹರಣೆಗೆ, ಈಗ ಮಾಧ್ಯಮಗಳಲ್ಲಿನ‌ ಜಾಹೀರಾತುಗಳ ಭಾಷೆಯನ್ನು ಗಮನಿಸಿ. ಅಲ್ಲಿ ಕನ್ನಡ ಕೇವಲ ಕ್ರಿಯಾಪದಗಳಿಗೆ ಸೀಮಿತವಾಗುತ್ತಾ‌, ವಿಷಯದ ಮುಖ್ಯಾಂಶವನ್ನು ಹೇಳಬೇಕಾದ ಪದಗುಚ್ಛಗಳು ಇಂಗ್ಲಿಷ್ ಭಾಷೆಯಲ್ಲಿರುತ್ತವೆ.  

ಮೇಲೆ ಹೇಳಿದ ಬೆಳವಣಿಗೆಗಳ ಪರಿಣಾಮವು ಕನ್ನಡ ಅಧ್ಯಾಪಕರ ಮೇಲೂ ಆಗಿ, ಅವರ ಮಾತು ಸಹ ಕನ್ನಡ-ಶ್ರೀಮಂತ ನೆಲೆಯಿಂದ ಉಪಯೋಗೀ – ಉಪಕರಣದ ನೆಲೆಗೆ ಬದಲಾಗುತ್ತಾ ಬಂದಿದೆ. ಇದು ಸ್ವಾಗತಾರ್ಹವಲ್ಲ. ವಿದ್ಯಾರ್ಥಿಗಳು ತಮ್ಮ ಕನ್ನಡ ಅಧ್ಯಾಪಕರ ಬಾಯಿಂದ ಅಲ್ಲದೆ ಇನ್ನು ಎಲ್ಲಿಂದ ಶ್ರೀಮಂತ ಹಾಗೂ ಸೊಗಸಾದ ಕನ್ನಡವನ್ನು ಕೇಳಬೇಕು? ಅಧ್ಯಾಪಕರ ಕನ್ನಡವೇ ನೀರು ಮಜ್ಜಿಗೆಯಾದರೆ ಇನ್ನು ವಿದ್ಯಾರ್ಥಿಗಳ ಕನ್ನಡದ ಬಗ್ಗೆ ಏನು ಹೇಳೋಣ! ಅದು ನಿಸ್ಸಾರ -ನಿರುಪಯೋಗಿ ಸಂಗತಿಯಾಗಿ ನಶಿಸಿಬಿಡುತ್ತದೆ. ಹೀಗಾಗಬಾರದಲ್ಲವೇ?

ಈ ಸನ್ನಿವೇಶವನ್ನು ಗಮನಿಸಿ ಎಲ್ಲ ಹಂತಗಳ ಕನ್ನಡ ಅಧ್ಯಾಪಕರು,  ತಾವಾಡುವ ಕನ್ನಡ ನುಡಿಯು ಕನ್ನಡಶ್ರೀಮಂತ ನೆಲೆಯಲ್ಲಿರುವಂತೆ ಹಾಗೂ ಈ  ವಿಷಯದಲ್ಲಿ ತಾವು ತಮ್ಮ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತೆ ನೋಡಿಕೊಳ್ಳಬೇಕು. ಇದು ಕನ್ನಡ ಅಧ್ಯಾಪಕರು ಮಾತ್ರ ಕನ್ನಡಕ್ಕಾಗಿ ಮಾಡಬಹುದಾದ ಬಹುಮುಖ್ಯ ಕೆಲಸ ಅನ್ನಿಸುತ್ತದೆ.  ಪೀಳಿಗೆ ಪೀಳಿಗೆಗಳನ್ನು ಪ್ರಭಾವಿಸುವ ಶಕ್ತಿ ಅಧ್ಯಾಪಕರಿಗಿರುತ್ತದೆ. ಈ ದೃಷ್ಟಿಯಿಂದ ಕನ್ನಡವನ್ನು ಉಳಿಸಿ ಬೆಳೆಸುವುದರಲ್ಲಿ ಇದು ಅಧ್ಯಾಪಕರು ಇಡಬಹುದಾದ ಸರಳ ಆದರೆ ಪರಿಣಾಮಕಾರಿಯಾದ ಹೆಜ್ಜೆಯಾಗಿದೆ. ಕನ್ನಡವು ಕನ್ನಡವ ಕನ್ನಡಿಸುತಿರಲಿ ಎಂದು ಬೇಂದ್ರೆ ಹೇಳಿದರು, ಈಗ ಕನ್ನಡ ಅಧ್ಯಾಪಕರು ತಮ್ಮ ಹಾಗೂ ತಮ್ಮ ವಿದ್ಯಾರ್ಥಿಗಳ ಕನ್ನಡವನ್ನು ಕನ್ನಡಿಸುವ ಸನ್ನಿವೇಶ ಬಂದಿದೆ.  ಕಾಲದ ಈ ಕರೆಗೆ ಕನ್ನಡ ಅಧ್ಯಾಪಕ ಬಂಧುಗಳು ಎಚ್ಚೆತ್ತುಕೊಳ್ಳಬೇಕಿದೆ.